ನವದೆಹಲಿ: ನನ್ನ ದೇಶದ ಜನರು ನನಗೆ ಮತ ಚಲಾಯಿಸುತ್ತಾರೆ” ಎಂದು ನಾನು ನಂಬುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, “ನಾನು ಹಿಂದೂ-ಮುಸ್ಲಿಂ ಮಾಡುವ ದಿನ, ನಾನು ಸಾರ್ವಜನಿಕ ಬದುಕಿಗೆ ಅನರ್ಹನಾಗುತ್ತೇನೆ” ಮತ್ತು “ನಾನು ಹಿಂದೂ-ಮುಸ್ಲಿಂ ಮಾಡುವುದಿಲ್ಲ ಎಂಬುದು ನನ್ನ ಸಂಕಲ್ಪ” ಎಂದು ಹೇಳಿದರು.
ವಾರಣಾಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ ನಂತರ ನೀಡಿದ ಸಂದರ್ಶನದಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.
ಹೆಚ್ಚು ಮಕ್ಕಳ ಹೆರುವವರಿಗೆ ದೇಶದ ಆಸ್ತಿ ಹಂಚಿಕೆಯಾಗಲಿದೆ ಎಂದು ನಾನು ಹೇಳುವಾಗ ಎಲ್ಲೂ ಮುಸ್ಲಿಂ ಎಂಬ ಪದ ಬಳಸಿಲ್ಲ. 11 ಮಕ್ಕಳಿದ್ದಾರೆ ಎಂಬ ಹೇಳಿಕೆ ಬಂದಾಗ ಏಕೆ ಅದನ್ನು ಮುಸ್ಲಿಮರಿಗೇ ಜೋಡಿಸುತ್ತೀರಿ? ಏಕೆ ಮುಸಲ್ಮಾನರಿಗೆ ಅನ್ಯಾಯ ಮಾಡುತ್ತೀರಿ ನೀವು? ಇಲ್ಲಿನ ಬಡ ಕುಟುಂಬಗಳಲ್ಲೂ ಇದೇ ಪರಿಸ್ಥಿತಿ ಇದೆ. ಅವರಿಗೆ ಮಕ್ಕಳನ್ನು ಓದಿಸಲೂ ಆಗುತ್ತಿಲ್ಲ, ಯಾವುದೇ ಸಮಾಜ ಇರಲಿ. ಎಲ್ಲಿ ಬಡತನ ಇದೆಯೋ ಅಲ್ಲಿ ಮಕ್ಕಳೂ ಹೆಚ್ಚಿದ್ದಾರೆ.
ನಾನು ಎಲ್ಲೂ ಹಿಂದೂ-ಮುಸ್ಲಿಂ ಎಂದಿಲ್ಲ. ನಾನು ಹೇಳಿದ್ದೇನು ಎಂದರೆ ಎಷ್ಟು ಮಕ್ಕಳನ್ನು ನೀವು ಹೊಂದಿದ್ದೀರೋ ಆ ಮಕ್ಕಳ ಪಾಲನೆ-ಪೋಷಣೆ ಮಾಡಬೇಕು. ಸರ್ಕಾರವು ಆಮಕ್ಕಳನ್ನು ಪಾಲನೆ ಮಾಡುವಂಥ ಪರಿಸ್ಥಿತಿ ಸೃಷ್ಟಿಸಬಾರದು ಎಂಬುದಾಗಿತ್ತು ಎಂದು ತಿಳಿಸಿದ್ದಾರೆ.
ನನ್ನ ಸುತ್ತಲೂ ಎಲ್ಲಾ ಮುಸ್ಲಿಂ ಕುಟುಂಬಗಳಿದ್ದವು. ನಮ್ಮ ಮನೆಯಲ್ಲೂ ಈದ್ ಆಚರಿಸುತ್ತಿದ್ದರು. ಈದ್ ದಿನದಂದು ನಮ್ಮ ಮನೆಯಲ್ಲಿ ಆಡುಗೆ ಮಾಡುತ್ತಿರಲಿಲ್ಲ, ನನ್ನ ಮನೆಗೆ ಎಲ್ಲಾ ಮುಸ್ಲಿಂ ಕುಟುಂಬಗಳಿಂದ ಆಹಾರ ಬರುತ್ತಿತ್ತು.
ಮೊಹರಂ ಪ್ರಾರಂಭವಾದಾಗ, ನಾವು ತಾಜಿಯಾ ಅಡಿಯಲ್ಲಿ ನಡೆದುಕೊಂಡು ಸಾಗಲು ನಮಗೆ ಕಲಿಸಿತ್ತು. ನಾನು ಆ ಜಗತ್ತಿನಲ್ಲಿ ಬೆಳೆದೆ. ಇಂದಿಗೂ ನನ್ನ ಅನೇಕ ಸ್ನೇಹಿತರು ಮುಸ್ಲಿಮರಾಗಿದ್ದಾರೆ ಎಂದು ಹೇಳಿದರು.