ಬೆಂಗಳೂರು: 2024 -25 ನೇ ಸಾಲಿನ ಆರ್.ಟಿ.ಇ. ಅಡಿ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 20ರವರೆಗೆ ವಿಸ್ತರಿಸಲಾಗಿದೆ. ಜೂನ್ 6ರಿಂದ ಶಾಲೆಗಳಲ್ಲಿ ಆರ್.ಟಿ.ಇ. ಅಡಿ ದಾಖಲಾತಿ ಪ್ರಕ್ರಿಯೆ ಆರಂಭಿಸಲಾಗುವುದು.
ಅರ್ಜಿ ಸಲ್ಲಿಸಲು ಏಪ್ರಿಲ್ 22 ರವರೆಗೆ ಅವಕಾಶ ನೀಡಲಾಗಿತ್ತು.ಈ ಕುರಿತಾದ ಮನವಿ ಮೇರೆಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 20ರವರೆಗೆ ವಿಸ್ತರಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಮೇ 30ರವರೆಗೆ ವಿಶೇಷ ಪ್ರವರ್ಗಗಳು ಮತ್ತು ಅರ್ಜಿಗಳ ಪರಿಶೀಲನೆ ನಡೆಸಲಿದ್ದು, ಪಟ್ಟಿ ಅಂತಿಮಗೊಳಿಸಿದ ನಂತರ ಜೂನ್ 1ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು.
ಜೂನ್ 5 ರಂದು ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಿದೆ. ಶಾಲೆಗಳಲ್ಲಿ ಆರ್‌ಟಿಇ ಅಡಿ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗಲಿದೆ. ಜೂನ್ 6ರಿಂದ ವಿದ್ಯಾರ್ಥಿಗಳ ದಾಖಲಾತಿ ನಡೆಯಲಿದೆ.
ಜೂ. 6ರಿಂದ 14ರವರೆಗೆ ಶಾಲೆಗಳಲ್ಲಿ ಮೊದಲ ಸುತ್ತಿನಡಿ ಶಾಲೆಗಳಲ್ಲಿ ದಾಖಲಾದ ಮಕ್ಕಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗುವುದು.
ಜೂ. 19ರಂದು ಆನ್ಲೈನ್ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಸಲಿದ್ದು, ಜೂನ್ 20ರಿಂದ 27ರವರೆಗೆ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಲ್ಲಿ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲಾಗುವುದು. ಜೂನ್ 20ರವರೆಗೆ ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.