ಗದಗ: ಹುಬ್ಬಳ್ಳಿಯಲ್ಲಿ ಮತ್ತೋರ್ವ ಯುವತಿಯ ಬರ್ಬರ ಹತ್ಯೆಯಾಗಿದೆ. ಈ ಪ್ರಕರಣಕ್ಕೆ ಪೊಲೀಸರೇ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
ಗದಗದಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಅಂಜಲಿಗೆ ಕೊಲೆ ಬೆದರಿಕೆ ಇದೆ ಎಂದು ದೂರು ನೀಡಿದ್ದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ.
ಒಂದು ರೀತಿಯಲ್ಲಿ ಪೊಲೀಸರು ಪರೋಕ್ಷವಾಗಿ ಅಂಜಲಿ ಕೊಲೆಗೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಪೊಲೀಸರನ್ನು ರಾಜಕೀಯ ವಿರೋಧಿಗಳ ದಮನಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಮಾಸುವ ಮುನ್ನವೇ ಅಂಜಲಿ ಹತ್ಯೆ ಪ್ರಕರಣ ನಡೆದಿದೆ. ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರ ವೈಫಲ್ಯವಿದೆ. ನೇಹಾ ರೀತಿಯಲ್ಲಿಯೇ ಕೊಲೆ ಮಾಡುವುದಾಗಿ ಅಜಲಿಗೆ ಆರೋಪಿ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಅಂಜಲಿ ಮನೆಯವರು ದೂರು ನೀಡಿದರೂ ಸಹ ಪೊಲೀಸರು ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಂಡಿಲ್ಲ. ಆರೋಪಿ ಬಂಧಿಸಿದ್ದರೆ ಈ ಕೊಲೆ ತಪ್ಪಿಸಬಹುದಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಪೊಲೀಸರು ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಸ್ಪೀಟು, ಮಟಕಾ, ಕ್ಲಬ್, ಮರಳು ವ್ಯವಹಾರಗಳ ದಂಧೆಯಲ್ಲಿ ಸಂಪೂರ್ಣವಾಗಿ ಶಾಮಿಲಾಗಿದ್ದಾರೆ.
ಬಹಳ ಲಂಚ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡು ಬಂದಿದ್ದಾರೆ. ಅಧಿಕಾರಿಗಳು ಹಾಗೂ ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಡೀ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕಿಡಿಕಾರಿದರು.