ಸಿರುಗುಪ್ಪ:- ಶೇ.25ರ ಶೈಕ್ಷಣಿಕ ಅನುದಾನದಲ್ಲಿ ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿಯಿಂದ ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪಂಚಾಯತ್ ರಾಜ್ ವ್ಯವಸ್ಥಾಪಕ ಬಸವರಾಜ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಗ್ರಾಮದ ಯುವಕ ದನುಸಿಂಗ್ ನಾಯಕ್ ಮಾತನಾಡಿ ಕೆಂಚನಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕಿನ ಏಕೈಕ ತಾಂಡ ಗ್ರಾಮವಿದ್ದು, ಈ ಗ್ರಾಮದಲ್ಲಿ ಬಂಜಾರ ಬುಡಕಟ್ಟಿನ ಬಡ ಜನರೇ ವಾಸಿಸುತ್ತಿದ್ದಾರೆ. ಆದರೂ ಉನ್ನತ ವಿದ್ಯಾಭ್ಯಾಸಕ್ಕೆಂದು ವಿದ್ಯಾರ್ಥಿಗಳು ವಿವಿಧ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಗಾಗಿ ಗ್ರಾಮ ಪಂಚಾಯಿತಿಗಳಿಂದ ಶೇ.25ರ ಶೈಕ್ಷಣ ಕ ಪ್ರೋತ್ಸಾಹ ಧನ ನೀಡುವಂತೆ ಸರ್ಕಾರದ ಆದೇಶವಿದೆ.ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಅಲೆದರೂ ಇಲ್ಲಿನ ಅಧಿಕಾರಿಗಳು ಪ್ರೋತ್ಸಾಹ ಧನ ನೀಡದೇ ನಿಮ್ಮ ಗ್ರಾಮದಲ್ಲಿ ಸರಿಯಾಗಿ ತೆರಿಗೆ ವಸೂಲಿಯಾಗಿಲ್ಲವೆಂದು ಸಬೂಬು ನೀಡುತ್ತಿದ್ದಾರೆ.
ಆದ್ದರಿಂದ ಇಲ್ಲಿನ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗುತ್ತಿದ್ದು ಬಡ ವಿದ್ಯಾರ್ಥಿಗಳ ಬದುಕು ಹಸನಾಗಲು ಉನ್ನತ ಶಿಕ್ಷಣ ಅತ್ಯಗತ್ಯವಾಗಿದ್ದು ಸಂಬದಪಟ್ಟ ಅಧಿಕಾರಿಗಳಿಂದ ನಮಗೆ ಆರ್ಥಿಕ ನೆರವು ಒದಗಿಸಬೇಕೆಂದು ಒತ್ತಾಯಿಸಿದರು.
ಪಂಚಾಯತ್ ರಾಜ್ ವ್ಯವಸ್ಥಾಪಕ ಬಸವರಾಜ್ ಅವರು ಮಾತನಾಡಿ ಸರ್ಕಾರದ ಆದೇಶದಂತೆ ಶೇ.25ರಲ್ಲಿ ಶೈಕ್ಷಣಿಕ ಪ್ರೋತ್ಸಾಹ ಧನ ನೀಡುವಂತೆ ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುವುದೆಂದರು.
ಇದೇ ವೇಳೆ ಕೆ.ತಾಂಡ ಗ್ರಾಮದ ವಿದ್ಯಾರ್ಥಿಗಳಾದ ಸೇವನಾಯ್ಕ, ವೆಂಕಟೇಶನಾಯ್ಕ,
ನಾಗರಾಜನಾಯ್ಕ, ಬಾಲಾಜಿನಾಯ್ಕ, ವಿನೋದನಾಯ್ಕ, ರವಿನಾಥನಾಯ್ಕ್, ಇನ್ನಿತರರಿದ್ದರು.
ವರದಿ.ಶ್ರೀನಿವಾಸ ನಾಯ್ಕ