ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು, ಗ್ಯಾರಂಟಿ ಯೋಜನೆ ಜಾರಿಗೆ ತಂದು ನುಡಿದಂತೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿರುವುದು ರೈತ ವಿರೋಧಿ ಸರ್ಕಾರ. ಸಾಲ ಕೊಟ್ಟಿದೆ ಹೊರತು ಯಾವುದೇ ಸಾಧನೆ ಮಾಡಿಲ್ಲ ಎಂದು ಗುಡುಗಿದರು.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ, ಅಂಜಲಿ ಎಂಬ ಇಬ್ಬರು ಯುವತಿಯರ ಕೊಲೆಯಾಗಿದೆ. ಮುಂದಿನ ದಿನಗಳಲ್ಲಿ ಯಾರ ಯಾರ ಕೊಲೆಯಾಗಲಿದೆಯೋ ಎಂಬ ಭಯ ಶುರುವಾಗಿದೆ. ಕಾಲೇಜಿಗೆ ಹೋದರೆ, ಮನೆಯಿಂದ ಹೊರ ಹೋದರೆ ಬದುಕಿ ಬರುತ್ತೇವೆ ಎಂಬ ಗ್ಯಾರಂಟಿ ಮಹಿಳೆಯರಲ್ಲಿ ಇಲ್ಲದಂತಾಗಿದೆ. ಬಸ್, ವಿದ್ಯುತ್ ಫ್ರೀ ಕೊಟ್ಟರೆ ಏನು ಪ್ರಯೋಜನ ಬದುಕುವ ಅವಕಾಶವನ್ನೇ ಕಿತ್ತುಕೊಳ್ಳುತ್ತಿದೆ.
ತನ್ನ ಅಕ್ಕನನ್ನು ಕೊಲೆ ಮಾಡಿದವನನ್ನು ನೇಣಿಗೆ ಹಾಕಿ ಎಂದು ಅಂಜಲಿ ತಂಗಿ ಹೇಳುತ್ತಿದ್ದಾಳೆ. ಆದರೆ ಸರ್ಕಾರವನ್ನೇ ನೇಣಿಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಜಲಿ ಕೊಲೆ ಹಿಂದೆ ಪೊಲೀಸರ ಲೋಪವಿದೆ ಎಂದು ಗೃಹ ಸಚಿವರೇ ಒಪ್ಪಿಕೊಂಡಿದ್ದಾರೆ. ಪೊಲೀಸರ ಲೋಪವನ್ನು ನೀವೇ ಒಪ್ಪಿಕೊಂಡ ಮೇಲೆ ನಿಮಗೆ ಸರ್ಕಾರ ನಡೆಸಲು ಏನು ಯೋಗ್ಯತೆ ಇದೆ? ಕೊಲೆಗೆಡುಕರಿಗೆ ಕಾಂಗ್ರೆಸ್ ಸರ್ಕಾರ ಸ್ವರ್ಗವಾಗಿದೆ ಎಂದು ಕಿಡಿಕಾರಿದರು.