ಮೈಸೂರು: ನನಗೂ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರೇಮಾಂಕುರದ ಕಹಾನಿ ಬಿಚ್ಚಿಟ್ಟಿದ್ದಾರೆ.
ಮೈಸೂರಿನ ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ ಎಂದು ಹೇಳಿದರು. ಈ ಮೂಲಕ ವಿದ್ಯಾರ್ಥಿ ಜೀವನದಲ್ಲಿನ ಲವ್ ಸ್ಟೋರಿಯನ್ನು ನೆನಪು ಮಾಡಿಕೊಂಡಿದ್ದಾರೆ.
ನನಗೂ ಅಂತರ್ಜಾತಿ ವಿವಾಹ ಆಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ. ಅವರ ಮನೆಯವರೂ ಒಪ್ಪಲಿಲ್ಲ.
ಹಾಗಾಗಿ ನಮ್ಮ ಜನಾಂಗದ ಹುಡುಗಿಯನ್ನೇ ಮದುವೆ ಆಗಬೇಕಾಯಿತು ಎಂದು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು. ಇದರೊಂದಿಗೆ ಪರೋಕ್ಷವಾಗಿ ಕಾಲೇಜು ದಿನಗಳಲ್ಲಿ ಓರ್ವ ಹುಡುಗಿಯನ್ನು ಇಷ್ಟಪಟ್ಟಿರುವುದನ್ನು ತಿಳಿಸಿದರು.
ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ. ನಮ್ಮ ಸರ್ಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ.
ಅಂಬೇಡ್ಕರ್ ಮತ್ತು ಕುವೆಂಪು ಅವರ ಆಶಯದಂತೆ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಈ ಮೂಲಕ ಅಂತರ್ಜಾತಿ ವಿವಾಹಗಳ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದರು.