ಬಾಗಲಕೋಟೆ: ಲೋಕಸಭೆ ಚುನಾವಣೆ ಮುಗಿದ ನಂತರ ಮತ್ತೆ ರಾಯಣ್ಣ ಬ್ರಿಗೇಡ್ ಸ್ಥಾಪಿಸುವ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲಾ ಸಮಾಜದವರನ್ನು ಸೇರಿಸಿ ಪುನಃ ರಾಯಣ್ಣ ಬ್ರಿಗೇಡ್ ಮಾಡಬೇಕೆಂದು ಅನೇಕರು ಬೇಡಿಕೆ ಇಟ್ಟಿದ್ದಾರೆ.ಚುನಾವಣೆಯ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅನೇಕರು ರಾಯಣ್ಣ ಬ್ರಿಗೇಡ್ ಮತ್ತೆ ಆರಂಭಿಸುವಂತೆ ಕೇಳುತ್ತಿದ್ದಾರೆ. ಎಲ್ಲಾ ಸಮಾಜದವರನ್ನು ಸೇರಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ನಾನು ಒಬ್ಬನೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಬೇಕಾದರೂ ನಾನೊಬ್ಬನೇ ನಿರ್ಧಾರ ಕೈಗೊಂಡಿಲ್ಲ. ಜನರಿಂದ ಅಭಿಪ್ರಾಯ ಪಡೆದುಕೊಂಡೇ ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.