ಬೆಂಗಳೂರು : ಬೇಸಿಗೆ ರಜೆಯ ನಂತರ ಇಂದಿನಿಂದ ರಾಜ್ಯಾಧ್ಯಂತ ಶಾಲೆಗಳು ಅಧಿಕೃತವಾಗಿ ಪುನರಾರಂಭವಾಗುತ್ತಿವೆ. ಶಾಲೆಗಳಿಗೆ ವಿದ್ಯಾರ್ಥಿಗಳು ಆಗಮಿಸೋದನ್ನು ಸ್ವಾಗತ ಮಾಡೋದಕ್ಕೆ ಶಾಲೆಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಇಂದು ಮಕ್ಕಳಿಗೆ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಸಿಹಿಯೂಟದ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಇಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಅಂತ ತಿಳಿಸಿದೆ.
2024-25ನೇ ಸಾಲಿನ ಶಿಕ್ಷಣವನ್ನು ʼಶೈಕ್ಷಣಿಕ ಬಲವರ್ಧನೆʼ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ಸಂಚಿಸಿದೆ ಎಂದು ಹೇಳಿದೆ.
ಶಾಲಾ ಮಕ್ಕಳಿಗೆ ಮೊದಲ ದಿನವೇ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಣೆ
ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಇದೇ ಮೊದಲ ಬಾರಿ ಶಾಲಾ ಆರಂಭಕ್ಕೂ ಮೊದಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಿವೆ. ಒಂದೇ ಬಾರಿಗೆ ಎರಡೂ ಜೊತೆ ಸಮವಸ್ತ್ರ ನೀಡಲಾಗುತ್ತಿದೆ.