ಹುಬ್ಬಳ್ಳಿ: -ಹು-ಧಾ ಮಹಾನಗರ ಪಾಲಿಕೆಯ ಕೆಳಹಂತದ ಅಧಿಕಾರಿಗಳು ಮಾಡುವ ಎಟವಟ್ಟುಗಳು ಮೇಲಾಧಿಕಾರಿಗಳ ದಕ್ಷತೆ ಬಗ್ಗೆ ಅನುಮಾನ ಮೂಡಿಸುತ್ತವೆ. ಇದರಿಂದಾಗಿ ಮಹಾನಗರ ಪಾಲಿಕೆ ಮೇಲೆಯೇ ಜನರಿಗೆ ಅನುಮಾನ ಮೂಡುತ್ತದೆ. ಇಂತಹದ್ದೇ ಒಂದು ಘಟನೆ ಹು-ಧಾ ಮಹಾನಗರ ಪಾಲಿಕೆಯ ವಲಯ ಕಚೇರಿ- ೯ರಲ್ಲಿ ನಡೆದಿದ್ದು, ಪಾಲಿಕೆ ಆಯುಕ್ತರು ಇದನ್ನು ಸೂಕ್ಷ್ಮವಾಗಿ ಗಮನಿಸಿ ಜನರನ್ನು ಅಲೆದಾಡಿಸುತ್ತಿದ್ದ ಕೆಳಹಂತದ ಅಧಿಕಾರಿಗೆ ಸರಿಯಾಗಿ ಬುದ್ಧಿ ಹೇಳಿ, ಕೆಲವೇ ಗಂಟೆಯಲ್ಲಿ ಜನರ ಸಮಸ್ಯೆ ಬಗೆಹರಿಸಿದ್ದಾರೆ. ಇದೀಗ ಪಾಲಿಕೆ ಆಯುಕ್ತರ ದಕ್ಷತೆಯ ಕಾರ್ಯಕ್ಕೆ ಸಮಾಜ ಸೇವಕ ರಾಜು ನಾಯಕವಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಪಾಲಿಕೆಯ ವಲಯ ಕಚೇರಿ-೯ರಲ್ಲಿ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಇಸ್ಮಾಯಿಲ್ ಶಿವಳ್ಳಿ ಎಂಬಾತರು ಈ ಹಿಂದೆ ವಲಯ ಕಚೇರಿ-೬ರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಪ್ರಕಾಶ ಕಾಟವೇ ಎಂಬವರ ಮನೆಯ ಖಾತೆ ಬದಲಾವಣೆಯ ಕೆಲಸ ಮಾಡಿಕೊಡುವುದಾಗಿ ಸರ್ಕಾರಿ ಶುಲ್ಕ ಬಿಟ್ಟು ೧೫ಸಾವಿರಕ್ಕೆ ಬೇಡಿಕೆಯಿಟ್ಟು, ಅದರಲ್ಲಿ ೧೦ ಸಾವಿರ ಮುಂಚಿತವಾಗಿ ಪಡೆದು, ಒಂದು ವರ್ಷವಾದರೂ ಕೆಲಸವನ್ನು ಮಾಡದೇ, ವಾಪಸ್ ದಾಖಲೆ, ಹಣವನ್ನು ಕೊಡದೇ ಅಲೆದಾಡಿಸುತ್ತಿದ್ದರು.
ಈ ಬಗ್ಗೆ ನೊಂದ ಪ್ರಕಾಶ ಕಾಟವೆ ಬೇಸತ್ತು ಹೋಗಿದ್ದರು. ಈ ಬಗ್ಗೆ ಮಾಧ್ಯಮದ ಮುಂದೆಯೂ ಅಳಲು ಕೊಡಿಕೊಂಡಿದ್ದರು. ಈ ಕುರಿತು ಸಮಾಜ ಸೇವಕ ರಾಜು ನಾಯಕವಾಡಿ ಕೂಡಲೇ ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದರು. ತದನಂತರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಆಯುಕ್ತರು ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡಿದ್ದು, ಪಾಲಿಕೆ ಕೆಳಹಂತದ ಸಿಬ್ಬಂದಿಯಿಂದ ನೊಂದು ಹೋಗಿದ್ದ ಪ್ರಕಾಶ ಕಾಟವೆ ಅವರಿಗೆ ನ್ಯಾಯ ಒದಗಿಸಿದ್ದಾರೆ ಎಂದು ನಾಯಕವಾಡಿ ಹರ್ಷವ್ಯಕ್ತಪಡಿಸಿದ್ದಾರೆ.
ವರದಿ:- ಸುಧೀರ್ ಕುಲಕರ್ಣಿ