ನವದೆಹಲಿ: ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ಏಳು ನಕ್ಸಲರನ್ನು ಹೊಡೆದುರುಳಿಸಿದೆ. ಹಾಗೂ ಎನ್ ಕೌಂಟರ್ ನಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಓರ್ಚಾ ಪ್ರದೇಶದ ಗೋಬೆಲ್ ಗ್ರಾಮದ ಬಳಿಯ ಕಾಡಿನಲ್ಲಿ ಗುಂಡಿನ ಚಕಮಕಿ ನಡೆದಿದೆ.
ಪಡೆಗಳ ಜಂಟಿ ತಂಡದಲ್ಲಿ ನಾರಾಯಣಪುರ, ದಾಂತೇವಾಡ, ಕೊಂಡಗಾಂವ್ ಮತ್ತು ಬಸ್ತಾರ್ನ ನಾಲ್ಕು ಜಿಲ್ಲೆಗಳ ಪೊಲೀಸ್ ಜಿಲ್ಲಾ ರಿಸರ್ವ್ ಗಾರ್ಡ್ಗೆ ಸೇರಿದ ಸಿಬ್ಬಂದಿ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನ 45 ನೇ ಬೆಟಾಲಿಯನ್ ಸಿಬ್ಬಂದಿ ಇದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಸಮವಸ್ತ್ರದಲ್ಲಿದ್ದ ಏಳು ನಕ್ಸಲರ ಶವಗಳು ಪತ್ತೆಯಾಗಿವೆ. ಇದಲ್ಲದೆ, ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಗುಂಡಿನ ಚಕಮಕಿಯಲ್ಲಿ ಮೂವರು ಜವಾನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಎನ್ಕೌಂಟರ್ನೊಂದಿಗೆ, ಭದ್ರತಾ ಪಡೆಗಳೊಂದಿಗಿನ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಮೃತಪಟ್ಟ ಒಟ್ಟು ನಕ್ಸಲರ ಸಂಖ್ಯೆ ಈ ವರ್ಷ 122 ಕ್ಕೆ ತಲುಪಿದೆ.