ಸಿರುಗುಪ್ಪ :- ನಗರದ ತಹಶೀಲ್ದಾರರ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ ವತಿಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕ ಬಿ.ಎಮ್.ನಾಗರಾಜ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ನಡವಿ ಗ್ರಾಮಕ್ಕೆ ಮಂಜೂರಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಗೆ ಚಾಲನೆ ನೀಡುವಂತೆ ನಡವಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಬಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲಾಪುರ ಕ್ಯಾಂಪ್, ಬಾಲಾಜಿ ಕ್ಯಾಂಪ್, ಬೆನಕಗುಂಡಿ ವಲಯ ಮತ್ತು ಎಸ್.ಸಿ ಕಾಲೋನಿಗಳಿಗೆ ಉಂಟಾಗುವ ನೀರಿನ ಕೊರತೆ ನೀಗಿಸಬೇಕು.
ದೇಶನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 5ನೇ ವಾರ್ಡಿಗೆ ಬರುವ ಹಳೇ ದೇಶನೂರು ಗ್ರಾಮಕ್ಕೆ ನಿರಂತರ ವಿದ್ಯುತ್ ಜ್ಯೋತಿ ಕಲ್ಪಿಸಿ ಅಲ್ಲಿನ ಕುಡಿಯುವ ನೀರಿನ ಪೂರೈಕೆ ಮಾಡಿ ಸಮಸ್ಯೆ ನೀಗಿಸುವುದು, ತಾಲೂಕು ಪಂಚಾಯಿತಿ ಆವರಣದಲ್ಲಿ ನಂದಿನಿ ಕ್ಷೀರ ಮಳಿಗೆ ಸ್ಥಾಪಿಸಲು ನಿವೇಶನ, ಇಟಿಗಿಹಾಳ್ ಗ್ರಾಮವನ್ನು ಮದ್ಯ ಮುಕ್ತಗ್ರಾಮವನ್ನಾಗಿ ಘೋಷಿಸುವುದು ಮತ್ತು ಅಲ್ಲಿನ ಎಸ್.ಸಿ ಕಾಲೋನಿಯಲ್ಲಿ ನಿಲ್ಲುವ ಚರಂಡಿ ನೀರು ತೆರವುಗೊಳಿಸುವುದು.
ಪಹಣಿ ಸಮಸ್ಯೆ, ನಗರಸಭೆಯಲ್ಲಿ ಕಾರ್ಯವಿಳಂಬ, ಹೆದ್ದಾರಿಯ ಆಮೆಗತಿಯ ಕಾಮಗಾರಿ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ನಿವಾರಣೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅಹವಾಲುಗಳು ಸಲ್ಲಿಕೆಯಾದವು.ಇದೇ ವೇಳೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.
ವರದಿ :-ಶ್ರೀನಿವಾಸ ನಾಯ್ಕ