ಮುದಗಲ್ಲ :- ಹಾಳಾದ ರಸ್ತೆ: ಸಂಚಾರಕ್ಕೆ ಹೈರಾಣ ಮುದಗಲ್ಲ ಪಟ್ಟಣದ ಸಮೀಪದ ಗುಡಿಹಾಳ ಹೋಗುವ ರಸ್ತೆ ದಿಂದ ಮಾಟ್ಟೂರು ಕ್ರಾಸ್ 7 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದೆ.ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ಬಿದ್ದಿವೆ. ಅಲ್ಲಲ್ಲಿ ರಸ್ತೆ ಕಿತ್ತು ಹೋಗಿ ಸುಗಮ ಸಂಚಾರಕ್ಕೆ ಜನತೆ ಪರಿತಪ್ಪಿಸುವಂತಾಗಿದೆ.
ನಾಗರಿಕರ ಸಂಚಾರಕ್ಕೆ ಇನ್ನಿಲ್ಲದ ತೊಂದರೆಯಾಗಿದೆ. ರಸ್ತೆ ಬದಿ ಮಣ್ಣು ಕೊಚ್ಚಿ ಹೋಗಿದ್ದರಿಂದ ವಾಹನಗಳ ಓಡಾಟಕ್ಕೆ ವ್ಯತ್ಯಯವಾಗುತ್ತಿದೆ.ಎರಡು ಬದಿಯಲ್ಲೂ ಜಾಲಿಗಿಡಗಳು ಬೆಳೆದು ನಿಂತಿದ್ದು ಎದುರಿಗೆ ಬರುವ ವಾಹನಗಳೆ ಕಾಣುವುದಿಲ್ಲ. ಅಲ್ಲದೇ, ರಸ್ತೆ ಮತ್ಯುಕೂಪವಾಗಿ ಪರಿಣಮಿಸಿದ್ದರಿಂದ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ತಿರುಗಾಡುವಂತಾಗಿದೆ.
ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ಪಾದಚಾರಿಗಳು ಸಹ ಓಡಾಡಲು ಭಯ ಬೀಳುತ್ತಿದ್ದಾರೆ. ಬೈಕ್ ಸವಾರರ ಪಾಡು ಹೇಳತೀರದಾಗಿದೆ.ಇದರಿಂದ ಜನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ತೀರ ಕಿರಿದಾಗಿದ್ದು, ರಸ್ತೆಯ ಮಧ್ಯ ಭಾಗವೇ ಸಂಪೂರ್ಣ ಹಾಳಾಗಿದ್ದರಿಂದ ವಾಹನಗಳು ಸರ್ಕಸ್ ಮಾಡುತ್ತ ಚಲಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯ ಡಾಂಬರು ಕಿತ್ತು ಹೋಗಿದ್ದರಿಂದ ಅಲ್ಲಲ್ಲಿ ಕಲ್ಲುಗಳು ಮೇಲೆದ್ದು ಕೆಲವು ಕಡೆ ಗುಂಡಿಗಳು ನಿರ್ಮಾಣವಾಗಿವೆ.ಈ ರಸ್ತೆ ಮೇಲೆ ಎದುರಿನಿಂದ ಬರುವ ವಾಹನಗಳಿಗೆ ಇನ್ನೊಂದು ವಾಹನ ಜಾಗ ಬಿಡದಿದ್ದರೆ ವಾಹನ ನೆಲಕಚ್ಚುವ ಸಾಧ್ಯತೆಗಳೇ ಹೆಚ್ಚಾಗಿವೆ.
ಎದುರಿನಿಂದ ಬರುವ ವಾಹನ ಗಳಿಗೆ ಜಾಗ ಬಿಡಲು ಸಾಧ್ಯವಾಗದಷ್ಟು ರಸ್ತೆ ಇಕ್ಕಟ್ಟಾಗಿದೆ. ಇದರಿಂದಾಗಿ ಅನೇಕ ಬಾರಿ ಬೈಕ್ ಸವಾರರು ತೊಂದರೆ ಅನುಭವಿಸಿದ ಉದಾಹರಣೆಗಳಿವೆ. ನಿತ್ಯ ಕಾಲ್ನಡಿಗೆಯಲ್ಲಿ ಅಥವಾ ವಾಹನಗಳ ಮೂಲಕ ಸಮೀಪದ ಲಿಂಗಸೂರು ಹಾಗೂ ಮುದಗಲ್ಲ ಪಟ್ಟಣಕ್ಕೆ ಹಾಗೂ ಎಪಿಎಂಸಿಗೆ ಹೋಗಿ ಬರುವ ರೈತರು ಈ ಹದಗೆಟ್ಟ ರಸ್ತೆಯಿಂದ ರೋಸಿ ಹೋಗಿದ್ದಾರೆ.
ರಸ್ತೆ ದುರಸ್ತಿ ಮಾಡಿ ಎಂದರೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಅದಷ್ಟು ಬೇಗನೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮಟ್ಟೂರ ಪಂಚಾಯತ್ ಅಭಿವೃದ್ಧಿಯ ಅಧಿಕಾರಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಹಾಗೂ ಮಸ್ಕಿ ತಾಲೂಕಿನ ಜನಪ್ರಿಯ ಶಾಸಕರಾದ ಬಸನಗೌಡ ತುರ್ವಿಹಾಳ ಅವರು ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು ಎಂದು ಪತ್ರಿಕೆ ಮೂಲಕ ಶರಣಪ್ಪ ಹಿರೇಮನಿ ಹಾಗೂ ಸ್ಥಳೀಯ ಸವ೯ಜನಿಕರು ಮನವಿ ಮಾಡಿದರು.
ವರದಿ:- ಮಂಜುನಾಥ ಕುಂಬಾರ