ಸಿರುಗುಪ್ಪ : -ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೆಲಕಾಲ ಬೃಹತ್ ಪ್ರತಿಭಟನೆ ನಡೆಸಿ ನಂತರ ಗ್ರೇಡ್-2 ತಹಶೀಲ್ದಾರ್ ಸಿದ್ದಾರೂಡ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಶಾಸಕ ಎಮ್.ಎಸ್.ಸೋಮಲಿಂಗಪ್ಪ ಅವರು ಮಾತನಾಡಿ ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿಗಳ ನೆಪದಲ್ಲಿ ಒಂದು ಕಡೆ ಹೆಚ್ಚಿನ ಹಣಕಾಸನ್ನು ಕಸಿದು ಇನ್ನೊಂದೆಡೆ ಅಲ್ಪಸ್ವಲ್ಪ ಹಣವನ್ನು ಜನರಿಗೆ ನೀಡುತ್ತಾ ಸಾರ್ವಜನಿಕರಿಂದ ವಸೂಲಿಯಾದ ಹಣವನ್ನು ದೋಚುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನವಿರೋಧಿಯಾಗಿದೆ.
ವಾಲ್ಮೀಕಿ ಅಭಿವೃದ್ದಿ ನಿಗಮದ 187 ಕೋಟಿ ಹಣ ತೆಲಂಗಾಣಕ್ಕೆ ವರ್ಗಾವಣೆಯಾಗಿದೆ. ದಲಿತರಿಗೆ ಮೀಸಲಿಟ್ಟ ವಿಶೇಷ ಅನುದಾನವು ಗ್ಯಾರಂಟಿ ಪಾಲಾಗಿದ್ದು ಕೂಡಲೇ ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.ತಾಲೂಕಿನಲ್ಲಿ ಕೆಲವು ಮುಖಂಡರು, ಅಧಿಕಾರಿಗಳು, ಪೋಲೀಸರ ಕುಮ್ಮಕ್ಕಿನಿಂದಲೇ ರಾಜಾರೋಷವಾಗಿ ನೋಂಧಣಿಯ ಹೆಚ್ಚುವರಿ ಶುಲ್ಕ, ಮರಳು ಮತ್ತು ಮರಂ ಸಾಗಣೆ ದಂಧೆಗಳನ್ನು ನಡೆಯುತ್ತಿವೆಯೆಂದು ಆರೋಪಿಸಿದರು.
ತಾಲೂಕಾಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಮಾತನಾಡಿ ಪೆಟ್ರೋಲ್, ಡೀಸೆಲ್ ಹಾಗೂ ದಿನನಿತ್ಯದ ವಸ್ತುಗಳ ಬೆಲೆಯನ್ನು ಇಳಿಸುವುದಾಗಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆಯನ್ನು ಹಾಕಿ ಗ್ಯಾರಂಟಿಗಳನ್ನು ನೀಡುತ್ತಿದೆಂದರು.ನಗರದ ಬಿಜೆಪಿ ಕಛೇರಿಯಿಂದ ಮಹಾತ್ಮಗಾಂಧೀಜಿ ವೃತ್ತದವರೆಗೆ ಬೈಕ್(ದ್ವಿಚಕ್ರ ವಾಹನ) ಶವಯಾತ್ರೆ ನಡೆಸುವುದರೊಂದಿಗೆ ಎತ್ತಿನಗಾಡಿಗಳ ಮೂಲಕ ಆಗಮಿಸಲಾಯಿತು.ಇದೇ ವೇಳೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಇದ್ದರು.
ವರದಿ:-ಶ್ರೀನಿವಾಸ