ಬೆಂಗಳೂರು: ಕಂದಾಯ ಇಲಾಖೆಯು ಎಲ್ಲಾ ಆಯಾಮದಿಂದ ಡಿಜಿಟಲಿಕರಣಕ್ಕೆ ಮುಂದಾಗಿದೆ. ಈಗಾಗಲೆ ಇ-ಕಚೇರಿ ಅನುಷ್ಠಾನದಲ್ಲಿ ಶೇ.80ರಷ್ಟು ಪ್ರಗತಿ ಸಾಧಿಸಿದೆ.
ಭೂಸುರಕ್ಷಾ ಯೋಜನೆಯಡಿ ಕಳೆದ ಫೆಬ್ರವರಿಯಲ್ಲಿ ರಾಜ್ಯದ 31 ತಾಲೂಕಾ ಕಚೇರಿಯಲ್ಲಿ ಪ್ರಾಯೋಗಿಕವಾಗಿ ರೆಕಾರ್ಡ್ ರೂಂ ದಾಖಲೀಕರಣ ಕಾರ್ಯ ಪ್ರಾರಂಭಿಸಿದ್ದು, ಇದೂವರೆಗೆ 3 ಕೋಟಿ ದಾಖಲೆ ಸ್ಕ್ಯಾನಿಂಗ್ ಮಾಡಲಾಗಿದೆ.
ಮುಂದಿನ ಒಂದು ತಿಂಗಳಿನಲ್ಲಿ ರಾಜ್ಯದ ಉಳಿದ ತಾಲೂಕಿನಲ್ಲೂ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ನಡೆದ ಕಲಬುರಗಿ ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ದಾಖಲೆಗಳ ಡಿಜಿಟಲೀಕರಣಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ನಿರೀಕ್ಷಕರಿಗೆ ಲ್ಯಾಪಟಾಪ್ ವಿತರಿಸಲಾಗುತ್ತಿದ್ದು, ಅವರು ಹಳ್ಳಿಯಲ್ಲಿಯೆ ಕುಳಿತು ಕೆಲಸ ಮಾಡಬಹುದು.
ಕಂದಾಯ ಕೋರ್ಟ್ ಪ್ರಕರಣಗಳ ಸ್ಥಿತಿಗತಿ ಅರಿಯಲು ಆರ್.ಸಿ.ಸಿ.ಎಂ.ಎಸ್.(ರೆವೆನ್ಯೂ ಕೋರ್ಟ್ ಕೇಸ್ ಮ್ಯಾನೇಜಮೆಂಟ್ ಸಿಸ್ಟಮ್) ತಂತ್ರಾಂಶ ಅಭಿವೃದ್ಧಿಪಡಿಸಿದೆ. ಒಟ್ಟಾರೆ 2025ರ ಅಂತ್ಯಕ್ಕೆ ಕಂದಾಯ ಇಲಾಖೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುವುದು. ಆ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳೂ ಸಹಕರಿಸಬೇಕು ಎಂದು ತಿಳಿಸಿದರು.