ಬೆಂಗಳೂರು: ಜುಲೈ 1 ರಿಂದ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೇ ಜನನ, ಮರಣ ಪ್ರಮಾಣ ಪತ್ರ ಲಭ್ಯವಿರಲಿದೆ.ರಾಜ್ಯದಲ್ಲಿ ಜುಲೈ 1ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಸಂಭವಿಸಿದ 30 ದಿನಗಳ ಒಳಗೆ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಗ್ರಾಮ
ಪಂಚಾಯಿತಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ.
ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿ ಹಾಗೂ 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ ಗ್ರಾಪಂ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಆದೇಶ ಹೊರಡಿಸಲಾಗಿದೆ.
ಜನನ, ಮರಣ ನಡೆದ 21 ದಿನಗಳ ಒಳಗೆ ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರ ವಿತರಿಸಬೇಕು. 21 ರಿಂದ 30 ದಿನಗಳ ನಡುವೆ ನೋಂದಾಯಿಸಿದಲ್ಲಿ ಎರಡು ರೂಪಾಯಿ ಶುಲ್ಕ, 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ 5 ರೂ. ಶುಲ್ಕ ಪಡೆದು ನೋಂದಣಿ ಮಾಡಿಸಬಹುದು.
ಒಂದು ವರ್ಷದ ಬಳಿಕ ನೋಂದಣಿ ಮಾಡಿದರೆ ಪ್ರಥಮ ದರ್ಜೆ ದಂಡಾಧಿಕಾರಿ ಆದೇಶದ ಮೇರೆಗೆ 10 ರೂಪಾಯಿ ವಿಳಂಬ ಶುಲ್ಕ ಪಡೆದು ನೋಂದಣಿ ಮಾಡಿಸಬಹುದು.ವಿವರಗಳಿಗಾಗಿ ಇ-ಜನ್ಮ ಸಹಾಯವಾಣಿ ಸಂಖ್ಯೆ 1800 425 6578ಗೆ ಸಂಪರ್ಕಿಸಬಹುದಾಗಿದೆ.