ಮುಂಬೈ: ಭಾನುವಾರ ಮಹಾರಾಷ್ಟ್ರದ ಪುಣೆಯ ಲೋನಾವಾಲಾ ಪ್ರದೇಶದ ಭೂಶಿ ಅಣೆಕಟ್ಟಿನ ಹಿನ್ನೀರಿನ ಸಮೀಪವಿರುವ ಜಲಪಾತದಲ್ಲಿ ಮಹಿಳೆ ಮತ್ತು ಇಬ್ಬರು ಮಕ್ಕಳು ಮುಳುಗಿದ್ದು, 4-9 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಕುಟುಂಬವೊಂದು ವಿಹಾರಕ್ಕೆಂದು ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಶೋಧ ಮತ್ತು ರಕ್ಷಣಾ ತಂಡಗಳು ಅಲ್ಲಿಗೆ ಧಾವಿಸಿ ನೀರಲ್ಲಿ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿವೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಪಂಕಜ್ ದೇಶಮುಖ್ ತಿಳಿಸಿದ್ದಾರೆ.
ಅವರು ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತದ ನೀರಲ್ಲಿ ಜಾರಿದ್ದಾರೆ. ಬಳಿಕ ಜಲಾಶಯದ ಕೆಳಭಾಗದಲ್ಲಿ ಮುಳುಗಿದ್ದಾರೆ ಎಂದು ಎಂದು ಎಸ್ಪಿ ಹೇಳಿದ್ದಾರೆ.
ನೀರಲ್ಲಿ ಕೊಚ್ಚಿ ಹೋದವರಲ್ಲಿ ಶಾಹಿಸ್ತಾ ಅನ್ಸಾರಿ(36), ಅಮಿಮಾ ಅನ್ಸಾರಿ(13) ಮತ್ತು ಉಮೇರಾ ಅನ್ಸಾರಿ (8) ಮೃತದೇಹಗಳು ಪತ್ತೆಯಾಗಿದ್ದು, ಅದ್ನಾನ್ ಅನ್ಸಾರಿ (4) ಮತ್ತು ಮರಿಯಾ ಸಯ್ಯದ್ (9) ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಡಪ್ಸರ್ ಪ್ರದೇಶದ ಅನ್ಸಾರಿ ಕುಟುಂಬದ ಸದಸ್ಯರು ಭೂಶಿ ಅಣೆಕಟ್ಟಿಗೆ ವಿಹಾರಕ್ಕೆ ಹೋಗಿದ್ದರು. ಅವರು ಅಣೆಕಟ್ಟಿನ ಸಮೀಪವಿರುವ ಜಲಪಾತವನ್ನು ನೋಡಲು ಹೋಗಿದ್ದು, ಆ ಪ್ರದೇಶದಲ್ಲಿ ತೀವ್ರವಾದ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾದಾಗ ಅವರ ಗಮನಕ್ಕೆ ಬರಲಿಲ್ಲ. ಹೀಗಾಗಿ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಸೋಮವಾರ ಬೆಳಗ್ಗೆ ಪುನರಾರಂಭವಾಗಲಿದೆ ಎಂದು ಲೋನಾವಾಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.