ಮುಂಬೈ: ಮುಕೇಶ್- ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ 12ರಂದು ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ.
ಅದಕ್ಕೂ ಮುನ್ನ ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಬೈನಿಂದ 100 ಕಿಮೀ ದೂರದಲ್ಲಿರುವ ಪಾಲ್ಘರ್ ಪ್ರದೇಶದಲ್ಲಿನ ಐವತ್ತಕ್ಕೂ ಹೆಚ್ಚು ಜೋಡಿಗಳಿಗೆ, ಅದರಲ್ಲೂ ಆರ್ಥಿಕವಾಗಿ ಹಿಂದುಳಿದಂಥ ವಧು- ವರರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲಾಯಿತು.
ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ನಲ್ಲಿ ನಡೆದ ವಿವಾಹ ಸಮಾರಂಭವದಲ್ಲಿ ಈ ನೂತನ ದಂಪತಿಗಳ ಕುಟುಂಬದ ಪರವಾಗಿ ಸುಮಾರು 800 ಜನರು ಭಾಗವಹಿಸಿದ್ದರು.
ಅನಂತ್- ರಾಧಿಕಾ ಮದುವೆಗೆ ಇದು ಆರಂಭಿಕ ಕಾರ್ಯಕ್ರಮವಾಗಿದ್ದು, ಮುಂದಿನ ಮದುವೆ ಋತುವಿನಲ್ಲಿ ದೇಶದಾದ್ಯಂತ ಈ ರೀತಿಯಾಗಿ ನೂರಕ್ಕೂ ಹೆಚ್ಚು ವಿವಾಹಗಳಿಗೆ ಅಂಬಾನಿ ಕುಟುಂಬದ ಬೆಂಬಲ ದೊರೆಯಲಿದೆ. ಈ ಬಗ್ಗೆ ಸಂಕಲ್ಪವನ್ನೇ ಮಾಡಿಕೊಂಡಿದ್ದಾರೆ.
ಅಂಬಾನಿ ಕುಟುಂಬವು ಈ ತನಕ ಅನುಸರಿಸಿಕೊಂಡು ಬಂದಿರುವ ಸರ್ವಕಾಲದಲ್ಲೂ ಮಾನ್ಯವಾದ ತತ್ವ ಏನೆಂದರೆ, ಮಾನವ ಸೇವೆಯೇ ಮಾಧವ ಸೇವೆ ಎಂಬುದು. ಅಂದರೆ ಮನುಷ್ಯರಿಗೆ ಮಾಡಿದಂಥ ಸೇವೆಯು ಆ ಭಗವಂತನಿಗೆ ಸೇವೆ ಮಾಡಿದಂತೆಯೇ ಸರಿ ಎಂಬುದನ್ನು ನಂಬಿಕೊಂಡು ಬಂದಿದೆ.
ಈ ತತ್ವದ ಸ್ಫೂರ್ತಿಯ ಹಿನ್ನೆಲೆಯಲ್ಲಿಯೇ ತಮ್ಮ ಕುಟುಂಬದ ಯಾವುದೇ ಮುಖ್ಯ ಶುಭ ಸಮಾರಂಭಗಳಲ್ಲಿ ಇತರರಿಗೆ ಸೇವೆ ಒದಗಿಸುವ ಮೂಲಕ, ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಅಂಬಾನಿ ಕುಟುಂಬ ಜನ ಸೇವೆ ಮಾಡುತ್ತಾ ಬರುತ್ತಿದೆ.
ಅಂದ ಹಾಗೆ ಮುಂಬೈನಲ್ಲಿ ನಡೆದ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡರು ಮತ್ತು ನವ ವಿವಾಹಿತ ಜೋಡಿಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು, ಮತ್ತು ಈ ಮಂಗಳಕರ ಸಮಾರಂಭಕ್ಕೆ ವೈಯಕ್ತಿಕ ಸ್ಪರ್ಶವನ್ನೂ ಸೇರಿಸಿದರು.