ರೀಲ್ಸ್ ಹುಚ್ಚಾಟಕ್ಕೆ ಯುವ ಜನತೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇಲ್ಲೋರ್ವ ಯುವಕ ರೀಲ್ಸ್ ಗಾಗಿ ಕ್ಯಾಮರಾಗೆ ಪೋಸ್ ನೀಡಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಇಬ್ಬರು ಸ್ನೇಹಿತರು ಬೈಕ್ ನಲ್ಲಿ ತೆರಳಿದ್ದಾರೆ. ಈ ವೇಳೆ ಹಿಂಬದಿ ಕುಳಿತಿದ್ದ ಯುವಕ ಮೊಬೈಲ್ ನಲ್ಲಿ ರೀಲ್ಸ್ ಮಾಡಲು ಶುರು ಮಾಡಿದ್ದಾನೆ. ಈ ವೇಳೆ ಬೈಕ್ ಓಡಿಸುತ್ತಿದ್ದ ಯುವಕನನ್ನೂ ರೀಲ್ಸ್ ಗೆ ಪೋಸ್ ನೀಡುವಂತೆ ಗಮನ ಸೆಳೆದಿದ್ದಾನೆ.
ಬೈಕ್ ಓಡಿಸುತ್ತಿದ್ದಾತ ರೀಲ್ಸ್ ಗೆ ಪೋಸ್ ನೀಡಲೆಂದು ಹಿಂದೆ ತಿರುಗಿದ್ದಾನೆ ಅಷ್ಟೇ. ನಿಯಂತ್ರಣ ಕಳೆದುಕೊಂಡ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರೀಲ್ಸ್ ಗೆ ಪೋಸ್ ನೀಡುವ ಭರದಲ್ಲಿ ಬೈಕ್ ಓಡಿಸುತ್ತಿದ್ದೇನೆ ಎಂಬುದನ್ನೂ ಯುವಕ ಮರೆತಂತಿದೆ. ಅಪಘಾತದಲ್ಲಿ ಹಿಂಬದಿ ಕುಳಿತಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಸಾಲದ್ದಕ್ಕೇ ಇಬ್ಬರು ಬೈಕ್ ಸವಾರರು ಪ್ರಯಾಣದ ವೇಳೆ ಹೆಲ್ಮೆಟ್ ಕೂಡ ಧರಿಸಿಲ್ಲ. ಈ ಘಟನೆ ಮಹಾರಾಷ್ಟ್ರದ ಧೋಲೆ ಸೋಲಾಪುರ ಹೈವೆಯಲ್ಲಿ ನಡೆದಿದೆ.
ರೀಲ್ಸ್ ಹುಚ್ಚಾಟಕ್ಕೆ ಸ್ನೇಹಿತ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಅಪಾಯಕಾರಿಯಾಗಿ ರೀಲ್ಸ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುವ ಮುನ್ನ ಇಂತಹ ಘಟನೆಗಳ ಬಳಿಕವಾದರೂ ಎಚ್ಚೆತ್ತುಕೊಳ್ಳಬೇಕು.