ಚಾಮರಾಜನಗರ:ಕೊರೊನಾ ಕಾಲದಲ್ಲಿ ಆಕ್ಸಿಜನ್ ದುರಂತ ನಡೆದು ಕುಟುಂಬದ ಆಧಾರಸ್ತಂಭ ಕಳೆದುಕೊಂಡ ಸಂತ್ರಸ್ತರು ನ್ಯಾಯ ಸಿಗದಿದ್ದಕ್ಕೆ ತಮಗೆ ದಯಾ ಮರಣ ಕೊಡಿ ಎಂದು ಕಣ್ಣೀರು ಇಟ್ಟಿದ್ದಾರೆ.ಚಾಮರಾಜನಗರದಲ್ಲಿ ಸಂತ್ರಸ್ತ ಮಹಿಳೆಯರು ಸುದ್ದಿಗೋಷ್ಠಿ ನಡೆಸಿ ತಮ್ಮ ಅಳಲು ತೋಡಿಕೊಂಡಿದ್ದು, ಈ ವೇಳೆ ಉಮ್ಮಳಿಸಿ ಬಂದ ದುಃಖ ತಾಳಲಾರದೇ ಕಣ್ಣೀರಿಟ್ಟರು.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದ 3 ವರ್ಷದ ಹಿಂದೆ ನಡೆದ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಇನ್ನೂ ಕೂಡ ಸರಿಯಾದ ನ್ಯಾಯ ಸಿಗದೇ, ಪರಿಹಾರ ಸಿಗದೇ ಅಲೆದಾಡುತ್ತಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ನೌಕರಿಗೂ ಈಗ ಕುತ್ತು ಬಂದಿದೆ.
ತಾಲೂಕು ಕಚೇರಿ, ಸ್ಥಳೀಯ ಹಾಸ್ಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ಏಕಾಏಕಿ ಸಿಮ್ಸ್ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ಎಂದು ಸೂಚಿಸಿದ್ದು, ತಮ್ಮವರನ್ನು ಕಳೆದುಕೊಂಡ ಆಸ್ಪತ್ರೆಯಲ್ಲಿ ತಾವು ಕೆಲಸ ಮಾಡುವುದಿಲ್ಲ. ಬೇರೆ ಕಡೆ ತಮಗೆ ಖಾಯಂ ಉದ್ಯೋಗ ಕೊಡಿ ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.
ಆಕ್ಸಿಜನ್ ದುರಂತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು. ಇದು ಸಾಧ್ಯವಿಲ್ಲ ಎಂದಾದರೇ ತಮಗೆ ದಯಾ ಮರಣ ಕೊಡಿ ಎಂದು ಸಂತ್ರಸ್ತ ಮಹಿಳೆಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ಸಂತ್ರಸ್ತ ಕುಟುಂಬಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿ ಖಾಯಂ ಉದ್ಯೋಗದ ಭರವಸೆ ಕೊಟ್ಟಿದ್ದರು. ತಪ್ಪಿತಸ್ತರಿಗೆ ಶಿಕ್ಷೆ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಸರ್ಕಾರ ಬಂದು ಒಂದು ವರ್ಷವಾದರೂ ಯಾವುದೂ ಈಡೇರಿಲ್ಲ ಎಂದು ಸಂತ್ರಸ್ತ ಕಣ್ಣೀರು ಹಾಕಿದರು.
ನೆಪ ಮಾತ್ರಕ್ಕೆ 9 ಮಂದಿಗೆ ಗ್ರೂಪ್ ಡಿ ಹೊರ ಗುತ್ತಿಗೆ ಆದಾರದ ಮೇಲೆ ಕೆಲಸ ನೀಡಲಾಗಿತ್ತು. ಆದರೆ ಈಗ ಅದು ಕೂಡ ಇಲ್ಲದಂತಾಗಿದೆ. ಅತ್ತ ಕೂಲಿ ಕೆಲಸಕ್ಕೂ ಹೋಗಲಾಗದೆ, ಇತ್ತ ಹೊರ ಗುತ್ತಿಗೆ ಕೆಲಸವನ್ನು ಮಾಡಲಾಗದೆ, ತಾವು ಅತಂತ್ರರಾಗಿದ್ದೇವೆ ಎಂದು ಸಂತ್ರಸ್ತೆಯರು ಪರಿತಪಿಸಿದ್ದಾರೆ. ಇನ್ನಾದರೂ ಸರ್ಕಾರ ಇವರಿಗೆ ನ್ಯಾಯ ಕೊಡುವುದೇ ಎಂದು ಕಾದು ನೋಡಬೇಕಿದೆ.