ಬೆಳಗಾವಿ : ನಕಲಿ ಫೆಡರಲ್ ಲಾಜಿಸ್ಟಿಕ್ಸ್ ಕಂಪನಿ ಸ್ಥಾಪಿಸಿ ತೆರಿಗೆ ವಂಚನೆಯಲ್ಲಿ ತೊಡಗಿದ್ದ ತೆರಿಗೆ ಸಲಹೆಗಾರ ನಕೀಬ್ ನಜೀಬ್ ಮುಲ್ಲಾ ಎಂಬಾತನನ್ನು ಜಿಎಸ್‌ಟಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೃತ್ತಿಯಲ್ಲಿ ತೆರಿಗೆ ಸಲಹೆಗಾರನಾಗಿದ್ದ ಆರೋಪಿ ನಕೀಬ್ ಮುಲ್ಲಾ ಎಂಬಾತ ನಕಲಿ ಫೆಡರಲ್ ಲಾಜಿಸ್ಟಿಕ್ಸ್ ಕಂಪನಿ ನಡೆಸುತ್ತಿದ್ದ. ಜೊತೆಗೆ ಅನೇಕ ಸಂಸ್ಥೆಗಳ ಐಟಿ ರಿಟರ್ನ್ಸ್ ಮತ್ತು ಇತರ ಜಿಎಸ್ಟಿ ಸಂಬಂಧಿತ ಸಮಸ್ಯೆಗಳ ಫೈಲಿಂಗ್ ನಿರ್ವಹಿಸುತ್ತಿದ್ದ. ನಕಲಿ ಇನ್ ವಾಯಿಸ್ ಸೃಷ್ಟಿಸಿ ತೆರಿಗೆ ವಂಚನೆ ಮಾಡುತ್ತಿದ್ದ ಈತ 132 ಕೋಟಿ ರೂ. ಜಿ ಎಸ್ ಟಿ ವಂಚನೆ ಮಾಡಿರುವ ಆರೋಪದಲ್ಲಿ ಸಧ್ಯ ಬೆಳಗಾವಿಯ ವಿಭಾಗದ ಜಿ.ಎಸ್.ಟಿ ಅಧಿಕಾರಿಗಳು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನೇಕರಿಗೆ ಜಿಎಸ್‌ಟಿ ವಿಚಾರದಲ್ಲಿ ವಂಚನೆ ಮಾಡಿದ್ದ ಆರೋಪದಲ್ಲಿ ನಕೀಬ್ ನಜೀಬ್ ಮುಲ್ಲಾ ವಿರುದ್ಧ ಸಂತ್ರಸ್ತರ ದಾಖಲೆ ಆಧರಿಸಿ ಅಧಿಕಾರಿಗಳು ಆರೋಪಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ತೆರಿಗೆ ಹಣ ವಂಚನೆ ಮಾಡಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ.
ಆರೋಪಿ ನಕೀಬ್ ನಜೀಬ್ ಮುಲ್ಲಾ ಮೇಲೆ ಸಿಜಿಎಸ್‌ಟಿ ಕಾಯ್ದೆ, 2017 ರ ಸೆಕ್ಷನ್ 69 ರ ನಿಬಂಧನೆಗಳ ಅಡಿಯಲ್ಲಿ ಸೆಕ್ಷನ್ 132(1) (ಬಿ) ಮತ್ತು 132 (1)(ಸಿ) CGST ಕಾಯಿದೆ, 2017 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಯನ್ನು ಅಧಿಕಾರಿಗಳು ಬೆಳಗಾವಿ ಜೆ ಎಮ್ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಸಂದರ್ಭದಲ್ಲಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.