ಬಾಗಲಕೋಟೆ: ಕುಟುಂಬಸ್ಥರು ವಾಸವಿದ್ದ ಶೆಡ್ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ತಾಯಿ ಮತ್ತು ಮಗಳು ಸಜೀವ ದಹನ ಆಗಿರುವ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳನ ಬೆಳಗಲಿ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ದ್ವೇಷ ಅಥವಾ ಆಸ್ತಿ ವಿವಾದ ಹಿನ್ನೆಲೆ ದುರ್ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ಬೆಳಗಲಿ ಗ್ರಾಮದ ದಸ್ತಗೀರಸಾಬ್ ಪೆಂಡಾರಿ ಅವರು ತಮ್ಮ ಕುಟುಂಬದೊಂದಿಗೆ ಸ್ವಂತ ಜಮೀನಿನಲ್ಲಿ ಶೆಡ್ ಹಾಕಿ ವಾಸವಿದ್ದರು. ಕುಟುಂಬದ ಐವರು ರಾತ್ರಿ ಅದೇ ಶೆಡ್ನಲ್ಲಿ ಮಲಗಿದ್ದಾರೆ. ದುಷ್ಕರ್ಮಿಗಳು ಬೆಳಗಿನ ಜಾವ 2.30 ರಿಂದ 3.30 ನಡುವೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಸಿಂಟೆಕ್ಷ್ನಲ್ಲಿ ತಂದಿದ್ದ ಪೆಟ್ರೋಲ್ ಹಾಕಿ ತಗಡಿನ ಸೆಡ್ಗೆ ಸುರಿದು ಬೆಂಕಿ ಹೆಚ್ಚಿದ್ದಾರೆ. ಐದು ಜನರಲ್ಲಿ ತಾಯಿ ಮತ್ತು ಮಗಳು ಸುಟ್ಟು ಕರಕಲಾಗಿದ್ದಾರೆ. ಮೃತರನ್ನು ಜೈಬಾನ್ ಪೆಂಡಾರಿ (60) ಶಭಾನ್ ಪೆಂಡಾರಿ(22) ಎಂದು ಗುರುತಿಸಲಾಗಿದೆ.
ಇನ್ನು ಕುಟುಂಬದ ಯಜಮಾನನಾದ ದಸ್ತಗೀರಸಾಬ್ ಪೆಂಡಾರಿ ಹಾಗೂ ಸುಭಾನ್ ಪೆಂಡಾರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಹಾಲಿಂಗಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಹಚ್ಚಿದ್ದ ಸಮಯದಲ್ಲಿ ಪೆಟ್ರೋಲ್ ವಾಸನೆಯಿಂದ ಶೆಡ್ನಿಂದ ಹೊರಬಂದ ಸಿದ್ದಿಕ್ಕಿ ಎಂಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ದುಷ್ಕರ್ಮಿಗಳು ಅಂದಾಜು 100 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಹಾಗೂ ಎರಡು ಎಚ್ಪಿ ಮೋಟಾರ್ ಅನ್ನು ಈ ದುಶ್ಕೃತ್ಯಕ್ಕೆ ಬಳಕೆ ಮಾಡಿದ್ದಾರೆ. ಶೆಡ್ಗೆ ಪೆಟ್ರೋಲ್ ಸ್ಪ್ರೇಮಾಡಿ, ಬೆಂಕಿ ಹಚ್ಚುವ ಮುನ್ನ ಶೆಡ್ ಬಾಗಿಲಿಗೆ ಲಾಕ್ ಮಾಡಿದ್ದಾರೆ. ಇಡೀ ಕುಟುಂಬವನ್ನು ನಾಶ ಮಾಡುವ ಉದ್ದೇಶದಿಂದ ಈ ಹೀನ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್.ಪಿ.ಅಮರನಾಥ ರೆಡ್ಡಿ ಭೇಟಿ ನೀಡಿದ್ದು, ಶ್ವಾನ ದಳದ ಮೂಲಕ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕುಟುಂಬದ ಐವರು ಸದಸ್ಯರನ್ನು ಸಜೀವ ದಹನ ಮಾಡಲು ಯತ್ನಸಿದ ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದರು. ಸದ್ಯ ಕೃತ್ಯಕ್ಕೆ ಸಂಬಂಧಿಸಿದಂತೆ ಅನುಮಾನಸ್ಪಾದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.