Ad imageAd image

ವಿಶೇಷ ಶಾಲೆಗಳ ಶಿಕ್ಷಕರ ವೇತನ ಪರಿಷ್ಕರಣೆಗೆ ಅಗತ್ಯ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
ವಿಶೇಷ ಶಾಲೆಗಳ ಶಿಕ್ಷಕರ ವೇತನ ಪರಿಷ್ಕರಣೆಗೆ ಅಗತ್ಯ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ವಿಶೇಷ ವಸತಿ ಶಾಲೆಗಳಲ್ಲಿ ಸೇವಾ ನಿರತ ಸಿಬ್ಬಂದಿಯ ವೇತನ ಪರಿಷ್ಕರಣೆ ಸೇರಿದಂತೆ ಮೂಲಭೂತ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಶೀಘ್ರವೇ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷಚೇತನ ಮಕ್ಕಳ ವಸತಿ ಶಾಲೆಗಳ ಸಭೆಯಲ್ಲಿ ಮಾತನಾಡಿದ‌ ಸಚಿವರು, 1982ರ ರಾಜ್ಯ ಅನುಸಂಧಾನ ಸಂಹಿತೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯ ಬೇಡಿಕೆಗಳನ್ನು ಇಲಾಖೆ ಸಹಾನುಭೂತಿಯಿಂದ ಪರಿಶೀಲಿಸಲಿದೆ ಎಂದು ಹೇಳಿದರು.

ಸದ್ಯ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ‌ ಶಿಕ್ಷಕರು ಹಾಗೂ ಶಿಕ್ಷಕೇತರರಿಗೆ ಕಳೆದ 14 ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಹೀಗಾಗಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು. ಜೊತೆಗೆ ಪ್ರತಿ ತಿಂಗಳು ವೇತನ ಭರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.

ಮಾನಸಿಕ ಭಿನ್ನ ಸಾಮರ್ಥ್ಯದ 25 ವಯೋಮಿತಿ ಮೀರಿದವರಿಗಾಗಿ ವೃತ್ತಿಪರ ತರಬೇತಿ ಕೇಂದ್ರ ಅಥವಾ ಪಾಲನಾ ಕೇಂದ್ರವನ್ನು ರಾಜ್ಯಾದ್ಯಂತ ನಡೆಸುವ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾದ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಸಿದ್ದೇಶ್ವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!