ಬೆಳಗಾವಿ: ನಗರದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಕನಿಷ್ಠ ₹80ರಿಂದ ₹100ರವರೆಗೆ ಮಾರಾಟವಾಗುತ್ತಿದೆ. ವಾರದ ಹಿಂದೆ ₹50ರಷ್ಟಿದ್ದ ದರ ಏಕಾಏಕಿ ಗಗನಮುಖಿ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಸಗಟು ವ್ಯಾಪಾರದಲ್ಲಿ ಎರಡು ವಾರಗಳ ಹಿಂದೆ 10 ಕೆ.ಜಿಯ ಒಂದು ಬುಟ್ಟಿಗೆ ₹600 ದರವಿತ್ತು.
ವಾರದಿಂದಲೂ ದರ ಏರಿಸುತ್ತಲೇ ಇದ್ದಾರೆ. ಬುಧವಾರ ಬೆಳಿಗ್ಗೆ 10 ಕೆ.ಜಿಯ ಒಂದು ಟ್ರೇ ಟೊಮೆಟೊಗೆ ₹1000 ತೆಗೆದುಕೊಂಡಿದ್ದಾರೆ. ನಾವು ₹100ಕ್ಕೆ ಮಾರಿದರೂ ಹಾನಿ ಸಂಭವಿಸುತ್ತದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.
‘ಸದ್ಯ ಹೋಟೆಲ್ ಉದ್ಯಮಿಗಳನ್ನು ಬಿಟ್ಟರೆ ಬೇರೆ ಯಾರೂ ಟೊಮೆಟೊ ಖರೀದಿಸಲು ಮುಂದೆ ಬರುತ್ತಿಲ್ಲ. ಹಣ್ಣುಗಳು ಕೊಳೆತು ನಷ್ಟ ಸಂಭವಿಸಿದೆ’ ಎಂದು ವರ್ತಕ ಸುರೇಶ ಹೇಳಿದರು.
‘ನಮ್ಮ ಬಳಿ ಜವಾರಿ ಟೊಮೆಟೊ ಇವೆ. ನಿನ್ನೆ- ಮೊನ್ನೆ ₹80ರಂತೆ ಮಾರಿದ್ದೇನೆ. ಬುಧವಾರ ₹100 ದರ ಮಾಡಿದ್ದಾರೆ. ಆದರೆ, ಮಹಿಳೆಯರು ಚೌಕಾಶಿ ಮಾಡಿ ₹80ಕ್ಕೇ ಖರೀದಿಸುತ್ತಿದ್ದಾರೆ. ಇಡೀ ದಿನ ವ್ಯಾಪಾರ ಮಾಡಿದರೂ ₹100 ಉಳಿಯುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿಗಳು.