ಬೆಂಗಳೂರು : ಸರ್ಕಾರಕ್ಕೆ ಏನೇ ಸವಾಲುಗಳು ಎದುರಾದರೂ ಸಹ ಮುಂದಿನ ಮೂರು ವರ್ಷದಲ್ಲಿ ಎಲ್ಲಾ 64 ಹೊಸ ತಾಲೂಕುಗಳಿಗೂ ಸ್ವಂತ ಆಡಳಿತ ಕಚೇರಿ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಸೋಮವಾರ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಅವರು, “ಹೊಸ ತಾಲೂಕುಗಳಲ್ಲಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಆರಂಭಿಸುವ ಬಗ್ಗೆ ನಾನು ಉತ್ತರ ನೀಡುವುದು ಸಮಂಜವಲ್ಲ.
ಮುಖ್ಯಮಂತ್ರಿಯವರ ಕಡೆಯಿಂದ ಉತ್ತರ ಕೊಡಿಸಲು ಪ್ರಯತ್ನಿಸುತ್ತೇನೆ. ಆದರೆ, ಹೊಸ ತಾಲೂಕುಗಳಿಗೆ ಸ್ವಂತ ಆಡಳಿತ ಕಚೇರಿ ನಿರ್ಮಾಣದ ಬಗ್ಗೆ ಸರ್ಕಾರ ಗಂಭೀರವಾಗಿದ್ದು, ಮುಂದಿನ ಮೂರು ವರ್ಷದಲ್ಲಿ ಪೂರೈಸಲಾಗುವುದು.
ಹೊಸ ತಾಲೂಕುಗಳು ರಚನೆಯಾಗಿ 6 ವರ್ಷಗಳಾಗಿದ್ದರೂ 14 ತಾಲೂಕುಗಳಲ್ಲಿ ಮಾತ್ರ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಉಳಿದ ತಾಲೂಕುಗಳಿಗೆ ಇನ್ನೂ ಸರ್ಕಾರಿ ಕಟ್ಟಡಗಳು ಮಂಜೂರೇ ಆಗಿಲ್ಲ. ಈ ಬಗ್ಗೆ ನಾನು ಹಿಂದಿನ ಅಧಿವೇಶನದಲ್ಲೇ ಹೇಳಿದ್ದೇನೆ.
ಮುಂದಿನ ಮೂರು ವರ್ಷದಲ್ಲಿ ಎಲ್ಲಾ ಹೊಸ ತಾಲೂಕುಗಳಿಗೂ ತಾಲೂಕು ಆಡಳಿತ ಕಚೇರಿ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಯಾವ್ಯಾವುದು ಹೊಸ ತಾಲೂಕು ಆಗಿದೆ.
ಅಷ್ಟೂ ತಾಲೂಕಿದೆ ಏನೇ ಸವಾಲು ಬಂದರೂ ನಾವು ಹೊಸ ಕಟ್ಟಡಗಳನ್ನು ಮಾಡಿ ಕೊಟ್ಟೇ ಕೊಡ್ತೀವಿ. ಸಿಬ್ಬಂದಿ ನಿಯೋಜನೆಯನ್ನೂ ಮಾಡಿಕೊಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.