ಮುಂಬೈ: ಮೋದಿ 3.0 ಸರ್ಕಾರದ ಮೊದಲ ಬಜೆಟ್ ಪ್ರಸಕ್ತ ಹಣಕಾಸು ವರ್ಷ 2024-25ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ(ಜುಲೈ 23) ಮಂಡಿಸಿದರು. ಬಜೆಟ್ ಭಾಷಣ ಮುಗಿದ ತಕ್ಷಣ ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಸೆನ್ಸೆಕ್ಸ್‌ನಲ್ಲಿ ಶೇಕಡಾ ಒಂದೂವರೆ ಕುಸಿತ ಕಾಣುತ್ತಿದ್ದರೆ, ಮತ್ತೊಂದೆಡೆ ನಿಫ್ಟಿ ವಹಿವಾಟಿನ ಅವಧಿಯಲ್ಲಿ ಶೇಕಡಾ 1ರಷ್ಟು ಕುಸಿತದೊಂದಿಗೆ ವಹಿವಾಟು ನಡೆಸುತ್ತಿದೆ.
ಬಜೆಟ್ ಘೋಷಣೆಯ ನಂತರ, ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಮುಂಬೈ ಷೇರುಪೇಟೆಯ ಮುಖ್ಯ ಸೂಚ್ಯಂಕ ಸೆನ್ಸೆಕ್ಸ್ ಸುಮಾರು 1200 ಪಾಯಿಂಟ್‌ಗಳಷ್ಟು ಕುಸಿದು 79224.32 ಪಾಯಿಂಟ್‌ಗಳಿಗೆ ತಲುಪಿದೆ. ನಿಫ್ಟಿಯಲ್ಲೂ ಸುಮಾರು ಶೇಕಡಾ ಒಂದರಷ್ಟು ಕುಸಿತ ಕಾಣುತ್ತಿದೆ. ನಿಫ್ಟಿ 232.65 ಅಂಕಗಳ ಕುಸಿತದೊಂದಿಗೆ 24,276.60 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.