ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ನಗರ ಪ್ರದೇಶಗಳಲ್ಲಿನ ಒಂದು ಕೋಟಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಮನೆ ನಿರ್ಮಾಣಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆ 2.0 ಅಡಿಯಲ್ಲಿ ನೆರವು ನೀಡುವುದಾಗಿ ಘೋಷಿಸಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಇದಕ್ಕೆ 10 ಲಕ್ಷ ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ. ಈ ಯೋಜನೆಗೆ ಕೇಂದ್ರ ಸರ್ಕಾರ 2.2 ಲಕ್ಷ ಕೋಟಿ ರೂ. ನೆರವು ನೀಡುವುದಾಗಿ ತಿಳಿಸಿದ್ದಾರೆ. ಈ ಮನೆಗಳ ಮೇಲಿನ ಸಾಲದ ಬಡ್ಡಿಗೆ ಸಬ್ಸಿಡಿ ಒದಗಿಸುವುದಾಗಿ ಪ್ರಸ್ತಾಪಿಸಿದ್ದಾರೆ.
ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಅನುಕೂಲವಾಗುವಂತೆ ಡಾರ್ಮಿಟರಿ ಶೈಲಿಯ ಬಾಡಿಗೆ ಮನೆ ನಿರ್ಮಾಣಕ್ಕೆ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೊಳ್ಳಲಾಗುವುದು. ಮನೆ ಮಾಲೀಕರು ತಮ್ಮ ಮನೆಗಳನ್ನು ಬಾಡಿಗೆ ನೀಡಿ ಆದರಿಂದ ಗಳಿಸುವ ಆದಾಯಕ್ಕೆ ವ್ಯವಹಾರದ, ವೃತ್ತಿಯ ಲಾಭಗಳು ಅಡಿಯಲ್ಲಿ ತೆರಿಗೆ ಹಾಕುವುದಿಲ್ಲ. ಮನೆ ಆಸ್ತಿ ಮೇಲಿನ ತೆರಿಗೆ ಅಡಿಯಲ್ಲಿ ತೆರಿಗೆ ಸಂಗ್ರಹಿಸುವುದಾಗಿ ತಿಳಿಸಲಾಗಿದೆ.