ಬೆಂಗಳೂರು : ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನ ನೀಡಿದ್ದು, ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿಯಾದ 39 ಲಕ್ಷ ರೈತರಿಗೆ ಸುಮಾರು 3535.30 ಕೋಟಿ ರು.ಗಳ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ನಿನ್ನೆ ಕೇಶವ್ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲದೆ ಹಿಂಗಾರು ಹಂಗಾಮಿನಲ್ಲಿ ಕೂಡ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಅತಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿತ್ತು.ಈ ಎರಡು ಜಿಲ್ಲೆಗಳ 4859 ರೈತರಿಗೆ 5.66 ಕೋಟಿ ರು.ಗಳ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ತಿಳಿಸಿದರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಪರಿಹಾರ ನೀಡಲಾಗಿದೆ. ಸುಪ್ರೀಂ ಕೋರ್ಟ್‌ಗೆ ಹೋದ ನಂತರ ಕೇಂದ್ರ ಸರ್ಕಾರ 3454.22 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ 32.66.42 ಕೊಟಿ ರು.ಗಳನ್ನು ಬೆಳೆಹಾನಿ ಪರಿಹಾರ ಹಾಗೂ 232.42 ಕೋಟಿ ರು.ಗಳನ್ನು ಜೀವನೋಪಾಯ ಪರಿಹಾರಕ್ಕೆ ಬಿಡುಗಡೆ ಮಾಡಿದೆ.
ಇದರ ಜೊತೆಗೆ ರಾಜ್ಯ ಸರ್ಕಾರದಿಂದ 1296 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ ಎಂದರು. ವಿಶೇಷವಾಗಿ ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಕಾಲುವೆಯಿಂದ ನೀರು ಬಿಟ್ಟರೂ ನೀರು ತಲುಪದ ಕಾಲುವೆಯ ಕೊನೆಯಲ್ಲಿರುವ ರೈತರು ಹಾಗೂ ನೀರು ಬಿಡುಗಡೆ ಮಾಡಲು ಆಗದೇ ಬೆಳೆ ಹಾನಿಗೆ ಒಳಗಾದ ರೈತರಿಗೂ ಸಹ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.