ಬೆಂಗಳೂರು: ಮುಡಾ ಹಗರಣದ ಕುರಿತಂತೆ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳ ನಾಯಕರು ವಿಧಾನಸೌಧದಲ್ಲಿ ಆಹೋರಾತ್ರಿ ಧರಣಿ ಮುಂದುವರಿಸಲು ಪಟ್ಟು ಹಿಡಿದಿವೆ. ವಿಪಕ್ಷಗಳ ಈ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ,ಸಾಕಷ್ಟು ಜನರಿಗೆ ಬಿಪಿ, ಶುಗರ್ ಇದೆ.ಆರೋಗ್ಯಕ್ಕಾಗಿ ಪಾದಯಾತ್ರೆ ಮಾಡಬಹುದು ಎಂದು ಲೇವಡಿ ಮಾಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ನಡೆದಿದ್ದರೆ ಯಾರ ಅವಧಿಯಲ್ಲಿ ನಡೆದಿದೆ, ಆಗ ಯಾರು ಮುಖ್ಯಮಂತ್ರಿ, ಕಂದಾಯ ಮಂತ್ರಿ ಆಗಿದ್ದರು, ಈ ನಾಯಕರೆಲ್ಲ ಆಗ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ನಿಜವಾಗಿಯೂ ಹೋರಾಟಮಾಡಬೇಕಿದ್ದರೆ ಮೊದಲಿನಿಂದ ಮಾಡುತ್ತಿದ್ದರು. ಈಗ ಊಟ, ಹಾಸಿಗೆ ಕೊಡ್ತಾರೆ ಮಲಗಿ ಹೋಗೋಣ ಅಂತ ಪ್ರತಿಭಟನೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷ ನಾಯಕರಿಲ್ಲದೆ ನಿಷ್ಕ್ರಿಯ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಡ್ರಾಮಾ ಮಾಡ್ತಿದ್ದಾರೆ. ಇದು ಅಹೋರಾತ್ರಿ ಧರಣಿ ಅಲ್ಲ ನಾಟಕ ಅಷ್ಟೇ. ವಿಪಕ್ಷದವರು ನಾವು ಜೀವಂತವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು ಈ ಧರಣಿ. ಸಾಕಷ್ಟು ಜನರಿಗೆ ಬಿಪಿ, ಶುಗರ್ ಇದೆ. ಆರೋಗ್ಯಕ್ಕಾಗಿ ಪಾದಯಾತ್ರೆ ಮಾಡಬಹುದು. ಇನ್ನೂ 20 ವರ್ಷ ರಾಜಕಾರಣ ಮಾಡಲು ಆರೋಗ್ಯ ಚೆನ್ನಾಗಿ ಇರಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯ ಪತ್ನಿಗೆ ಅವರ ಕುಟುಂಬದಿಂದ ಆಸ್ತಿ ಬಂದಿದೆ. ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ. ಕೇಂದ್ರ ಬಜೆಟ್ ವೈಫಲ್ಯ ಮುಚ್ಚಿಕೊಳ್ಳಲು ಸೂಚನೆ ಬಂದಿದೆ. ಅದಕ್ಕೆ ಇಲ್ಲಿ ಧರಣಿ ನಡೆಯುತ್ತಿದೆ. ಈ ನಾಟಕದ ಹಿಂದಿರುವವರು ಯಾರು ಎಂಬುದನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ.