ಬೆಂಗಳೂರು: ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕವಾಗಿದ್ದಾರೆ. ಜುಲೈ 31 ರಂದು ಅವರ ಪತಿ ರಜನೀಶ್ ಗೋಯಲ್ ನಿವೃತ್ತರಾಗಲಿದ್ದು, ಶಾಲಿನಿ ರಜನೀಶ್ ಅಧಿಕಾರ ಸ್ವೀಕರಿಸಲಿದ್ದಾರೆ.
ಕರ್ನಾಟಕ ಕೇಡರ್ ನ 1989ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಶಾಲಿನಿ ರಜನೀಶ್ ಸೇವಾವಧಿ ಜೂನ್ 2027 ರವರೆಗೆ ಇದೆ.ಪ್ರಸ್ತುತ ಅವರು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯದ ಆಡಳಿತ ವ್ಯವಸ್ಥೆಯ ಮುಖ್ಯಸ್ಥ ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹುದ್ದೆ ಅಲಂಕರಿಸಿದ ದಂಪತಿಗಳ ಸಾಲಿಗೆ ರಜನೀಶ್ ಗೋಯಲ್ ಮತ್ತು ಶಾಲಿನಿ ರಜನೀಶ್ ಸೇರಲಿದ್ದಾರೆ.
ಈ ಹಿಂದೆ ಬಿ.ಕೆ. ಭಟ್ಟಾಚಾರ್ಯ ಮತ್ತು ತೆರೆಸಾ ಭಟ್ಟಾಚಾರ್ಯ ದಂಪತಿ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು. ನಂತರ ಬಿ.ಕೆ. ದಾಸ್ ಮತ್ತು ಮಾಲತಿ ದಾಸ್ ಅವರು ಮುಖ್ಯ ಕಾರ್ಯದರ್ಶಿಗಳಾಗಿದ್ದರು.
ಜುಲೈ 31 ರಂದು ನಿವೃತ್ತರಾಗಲಿರುವ ಪತಿ ರಜನೀಶ್ ಗೋಯಲ್ ಅವರಿಂದ ಶಾಲಿನಿ ರಜನೀಶ್ ಅಧಿಕಾರ ಸ್ವೀಕರಿಸಲಿದ್ದಾರೆ.
ಮುಖ್ಯ ಕಾರ್ಯದರ್ಶಿ ಹುದ್ದೆ ಆಯ್ಕೆ ಸಂಬಂಧ ಕಳೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿದ್ದು, ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ತೀರ್ಮಾನ ಪ್ರಕಟಿಸಿದ್ದಾರೆ.