ಬೆಳಗಾವಿ: ಮಹಾರಾಷ್ಟ್ರ, ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿಯುಂಟಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ, ಕೃಷ್ಣಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಾಂಡೇಯ, ವೇದಗಂಗಾ ನದಿಗಳ ಅಬ್ಬರ ಜೋರಾಗಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ.ಸೇತುವೆಗಳು, ರಸ್ತೆಗಳು, ಕೃಷಿ ಭೂಮಿ ನೀರು ಪಾಲಾಗಿದ್ದು, ಜನತೆ ತತ್ತರಿಸಿಹೋಗಿದ್ದಾರೆ.
ಘಟಪ್ರಭಾ ನದಿ ಪ್ರವಾಹದಿಂದಾಗಿ 6 ಸೇತುವೆಗಳು ಮುಳುಗಡೆಯಾಗಿವೆ. ಜಿಲ್ಲೆಯಲ್ಲಿ 36 ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಘಟಪ್ರಭಾ ನದಿ ನೆರೆಯಿಂದಾಗಿ ಗೋಕಾಕ್ ನಗರದಲ್ಲಿ 300ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಲೋಳಸೂರ ಸೇತುವೆ ಮುಳುಗಿದ್ದು, ಸಂಕೇಶ್ವರ-ಧಾರವಾಡ ನಡುವಿನ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಲೋಳಸೂರ ಸೇತುವೆ ಮೇಲೆ ರಭಸದಿಂದ ನದಿ ನೀರು ಹರಿಯುತ್ತಿದೆ.
ಮುಂಜಾಗೃತಾ ಕ್ರಮವಾಗಿ ಸೇತುವೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ರಸ್ತೆ ಮಾರ್ಗ ಬಂದ್ ಮಾಡಲಾಗಿದೆ.