ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್ ವಿರುದ್ಧ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ.
ಕರ್ನಾಟಕದ ಜಿಎಸ್ಟಿ ಅಧಿಕಾರಿಗಳು ಮತ್ತು ಜಿಎಸ್ಟಿ ಗುಪ್ತಚರ ಪ್ರಧಾನ ನಿರ್ದೇಶನಾಲಯದಿಂದ 32 ಸಾವಿರ ಕೋಟಿ ರೂಪಾಯಿ ಮೊತ್ತದ ಶೋಕಾಸ್ ಪೂರ್ವ ನೋಟಿಸ್ ಜಾರಿ ಮಾಡಲಾಗಿದೆ.
ಈ ನೋಟಿಸ್ ಕುರಿತು ಇನ್ಫೋಸಿಸ್ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸಿಬಿಗೆ ಮಾಹಿತಿ ನೀಡಿದ್ದು, ನೋಟಿಸ್ ಗೆ ಪ್ರತಿಕ್ರಿಯೆ ನೀಡಿರುವುದಾಗಿ ತಿಳಿಸಿದೆ.
ಇನ್ಫೋಸಿಸ್ ತೆರಿಗೆ ವಂಚನೆ ಆರೋಪದಡಿ ಕಟ್ಟಲು ಸೂಚಿಸಲಾದ 32 ಸಾವಿರ ಕೋಟಿ ರೂಪಾಯಿ ಮೊತ್ತ ಕಂಪನಿಯ ಒಂದು ಇಡೀ ವರ್ಷದ ಲಾಭಕ್ಕೆ ಸಮನಾಗಿದೆ. ಭಾರತೀಯ ಕಂಪನಿಯೊಂದು ವಿದೇಶಗಳ ಶಾಖೆಯ ಮೂಲಕ ನೀಡಿದ ಸೇವೆ ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಇತ್ತೀಚೆಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಹೊರಡಿಸಿದ ಸುತ್ತೋಲೆಯನ್ನು ಇನ್ಫೋಸಿಸ್ ಉಲ್ಲೇಖಿಸಿದ್ದು, ಇಂತಹ ವೆಚ್ಚಗಳು ಜಿಎಸ್ಟಿಗೆ ಅನ್ವಯವಾಗದು ಎಂದು ತಿಳಿಸಿದೆ.
ಇನ್ಫೋಸಿಸ್ ವಿದೇಶಿ ಗ್ರಾಹಕರ ಬೇಡಿಕೆ ಪೂರೈಸಲು ವಿದೇಶಗಳಲ್ಲಿ ಕೆಲವು ಶಾಖೆಗಳನ್ನು ಹೊಂದಿದ್ದು, 2017-18 ರಿಂದ 2021 -22ರ ಅವಧಿಯಲ್ಲಿ ವಿದೇಶಿ ಶಾಖೆಗಳ ಮೂಲಕ ನೀಡಿದ ಸೇವೆಗೆ ಐಜಿಎಸ್ಟಿ ಕಟ್ಟಬೇಕಿತ್ತು.
ಆದರೆ, ತೆರಿಗೆ ಪಾವತಿಸಿಲ್ಲ. ಇದು ತೆರಿಗೆ ವಂಚನೆ ಎಂದು ಪರಿಗಣಿಸಲಾಗಿದೆ. ಈ ಅವಧಿಗೆ ಪಾವತಿಸದೆ ಉಳಿದ 32,403 ಕೋಟಿ ರೂ. ಜಿಎಸ್ಟಿ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.