ಬೆಂಗಳೂರು: ಸಾಲಕ್ಕಾಗಿ ಆಸ್ತಿ ಜಪ್ತಿ ಮಾಡಲು ಅವಕಾಶವಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾದ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನಿಂದ ಈ ಆದೇಶ ನೀಡಲಾಗಿದೆ.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ(ಕೆಲವು ಜಮೀನುಗಳ ಹಸ್ತಾಂತರ ನಿಷೇಧ ಕಾಯ್ದೆ -ಪಿಟಿಸಿಎಲ್) ನಡಿ ಮಂಜೂರಾದ ಜಮೀನನ್ನು ಜನರಲ್ ಪವರ್ ಆಫ್ ಅಟಾರ್ನಿ(GPA) ಮಾಡಿಕೊಂಡ ಗೃಹ ನಿರ್ಮಾಣ ಸಂಘವು ಬ್ಯಾಂಕ್ ವೊಂದರಿಂದ ಪಡೆದ ಸಾಲಕ್ಕೆ ಬದಲಾಗಿ ಆಸ್ತಿ ಜಪ್ತಿ ಮಾಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಕಾಯ್ದೆಯಡಿ ಮಂಜೂರಾದ ಜಮೀನನ್ನು ಭೂ ಮಾಲೀಕರಿಗೆ ಮರು ಸ್ಥಾಪಿಸಿ ಆದೇಶಿಸಿದ್ದ ಜಿಲ್ಲಾಧಿಕಾರಿ ಕ್ರಮ ಪ್ರಶ್ನಿಸಿ ಜಮೀನು ಒತ್ತೆ ಇಟ್ಟುಕೊಂಡು ಸಾಲ ಪಾವತಿಸಿದ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಡಿಸಿಸಿ ಬ್ಯಾಂಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.
ವಿಚಾರಣೆ ಆಲಿಸಿದ ನ್ಯಾಯಪೀಠ, ಜಮೀನು ಮಾಲೀಕರಿಗೆ ಬ್ಯಾಂಕ್ ನಿಂದ ಪಡೆದ ಸಾಲದಿಂದ ಯಾವುದೇ ಲಾಭವಿಲ್ಲ. ಅಲ್ಲದೆ, ಬ್ಯಾಂಕ್ ಮತ್ತು ಜಮೀನು ಮಾಲೀಕರ ನಡುವೆ ಒಪ್ಪಂದವೂ ಆಗಿಲ್ಲ.
ಆದರೆ ಜಮೀನಿನ ಹಕ್ಕು ಹೊಂದಿರದ ಗೃಹ ನಿರ್ಮಾಣ ಸೊಸೈಟಿ ಆಸ್ತಿಯನ್ನು ಮತ್ತೊಂದು ಬ್ಯಾಂಕಿಗೆ ಅಡಮಾನ ಇಟ್ಟು ಸಾಲ ಪಡೆದಿದೆ. ಹೀಗಾಗಿ ಜಮೀನನ್ನು ಹರಾಜು ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.
ಪ್ರಕರಣದಲ್ಲಿ ಭೂ ಮಾಲೀಕರಿಗೆ ಮತ್ತು ಸಾಲ ನೀಡಿದ ಬ್ಯಾಂಕಿಗೆ ಸಂಬಂಧವಿಲ್ಲ. ಕಾಯ್ದೆಯಡಿ ಜಮೀನು ಪರಭಾರೆ ಅಥವಾ ಹಸ್ತಾಂತರಕ್ಕೆ ನಿಷೇಧವಿರಲಿದೆ. ಆದರೂ ಅಂತಹ ಜಮೀನಿನ ಮೇಲೆ ಬ್ಯಾಂಕು ಸೇರಿ ಇತರೆ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳುವುದನ್ನು ನಿಷೇಧಿಸಲಾಗಿಲ್ಲ.
ಅಂತಹ ಸಾಲ ಮರುಪಾವತಿ ಮಾಡದಿದ್ದಲ್ಲಿ ಈ ರೀತಿಯ ಆದೇಶದ ಮೂಲಕ ಜಮೀನು ಮಾರಾಟ ಅಥವಾ ವರ್ಗಾವಣೆ ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಹೇಳಲಾಗಿದೆ.