ಬೆಂಗಳೂರು : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಮಹಾಂತೇಶ ಶಿರೂರು ಜಾಮೀನು ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಗೊಳಿಸಿತು.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರು ಆರೋಪಿಯ ಅರ್ಜಿ ವಜಾಗೊಳಿಸಿ ಅದೇಶಿಸಿದ್ದಾರೆ.ಹಳೆಯ ದ್ವೇಷದಿಂದ ಅರ್ಜಿದಾರ ಆರೋಪಿ ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿದ್ದಾರೆ.ಹತ್ಯೆ ಮಾಡಿರುವ ರೀತಿ ನೋಡಿದರೆ, ಗುರೂಜಿ ಮೇಲೆ ಆರೋಪಿ ಎಷ್ಟು ದ್ವೇಷ ಬೆಳೆಸಿಕೊಂಡಿದ್ದ ಎನ್ನುವುದನ್ನು ಸೂಚಿಸುತ್ತದೆ.
ಸಮಾಜ ಓರ್ವ ವ್ಯಕ್ತಿಯಿಂದ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತದೆ. ಪ್ರಜೆ ಕಾನೂನು ಪಾಲಿಸಬೇಕಾಗುತ್ತದೆ. ಸಮಾಜದ ನಿಯಮಗಳಿಗೆ ಗೌರವ ತೋರಿಸಬೇಕಾಗುತ್ತದೆ.
ಅರ್ಜಿದಾರ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಿರುವುದು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದಾಖಲೆಗಳಿಂದ ತಿಳಿದುಬರುವ ಕಾರಣ ಜಾಮೀನು ಪಡೆಯಲು ಮಹಂತೇಶ್ ಅರ್ಹನಾಗಿಲ್ಲ ಎಂದು ಕೋರ್ಟ್ ಆದೇಶದಲ್ಲಿ ನ್ಯಾಯಪೀಠ ಹೇಳಿದೆ.
ಈ ಬೆಳವಣಿಗೆ ಗುರೂಜಿ ಹತ್ಯೆ ಪೂರ್ವಯೋಜಿತ ಎಂದು ತಿಳಿಯುತ್ತದೆ. ಅರ್ಜಿದಾರ ಮಾರಕಾಸ್ತ್ರಗಳೊಂದಿಗೆ ಗುರೂಜಿಯನ್ನು ಭೇಟಿ ಮಾಡಿ ಚಾಕುವಿನಿಂದ 56 ಬಾರಿ ಇರಿದು ಗಾಯಗೊಳಿಸಿ ಕೊಲೆ ಮಾಡಿದ್ದಾರೆ. ಅರ್ಜಿದಾರನ ಕೃತ್ಯ ಸಮಾಜದಲ್ಲಿ ಸಂಚಲನ ಮೂಡಿಸಿದ್ದಲ್ಲದೇ ದೊಡ್ಡ ಪ್ರಮಾಣದಲ್ಲಿ ಭಯವನ್ನೂ ಸೃಷ್ಟಿಸಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.