ತುರುವೇಕೆರೆ: ಪಟ್ಟಣದ 12ನೇ ವಾರ್ಡಿನಲ್ಲಿರುವ ಸರ್ಕಾರಿ ಮಾದರಿ ನೂತನ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಹೊಸದಾಗಿ ಮುಖ್ಯ ಶಿಕ್ಷಕರಾಗಿ ನೇಮಕೊಂಡು ಶಾಲೆಗೆ ಆಗಮಿಸಿದ ನಂ.ರಾಜು ಅವರಿಗೆ ಶಾಲೆಯ ಹಳೇ ವಿದ್ಯಾರ್ಥಿಗಳು ಪುಷ್ಪಾಹಾರ ಸಲ್ಲಿಸಿ ಸ್ವಾಗತ ಕೋರಿದರು.
ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಂಕರ್ ಮಾತನಾಡಿ, ತುರುವೇಕೆರೆಯ ಹಳೇ ಶಾಲೆಗಳಲ್ಲಿ ಜಿ.ಎಂ.ಎನ್.ಹೆಚ್.ಪಿ.ಎಸ್. ಶಾಲೆಯೂ ಒಂದಾಗಿದೆ. ಶಾಲೆಯಲ್ಲಿ ಕಲಿತ ಬಹಳಷ್ಟು ಮಂದಿ ಇಂದು ಸಮಾಜದ ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ ಪ್ರಸ್ತುತ ಶಾಲೆಯ ದಾಖಲಾತಿ ಸಂಖ್ಯೆ ಕುಸಿದಿದ್ದು, ಶಾಲೆಯ ಎಸ್.ಡಿ.ಎಂ.ಸಿ. ಸಮಿತಿ, ಶಿಕ್ಷಕರು, ಹಳೇ ವಿದ್ಯಾರ್ಥಿಗಳು ಶಾಲೆಯ ಪ್ರಗತಿಗೆ ಶ್ರಮಿಸುತ್ತಿದ್ದೇವೆ. ನೂತನ ಮುಖ್ಯ ಶಿಕ್ಷಕರು ತಮ್ಮ ಅನುಭವವನ್ನು ಧಾರೆ ಎರೆದು ಶಾಲೆಯ ಅಭಿವೃದ್ಧಿಗೆ ಹಾಗೂ ಮಕ್ಕಳ ಶೈಕ್ಷಣಿಕ ಬದುಕಿಗೆ ಅನುಕೂಲ ಮಾಡಿಕೊಡಬೇಕೆಂದರು.
ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ದಾಖಲಾತಿ ಕಡಿಮೆ ಇರುವ ಕಾರಣ ಅನುಮತಿ ಸಿಕ್ಕಿಲ್ಲ. ಅದನ್ನು ಪಡೆಯುವ ಹಂತಕ್ಕೆ ಶಾಲೆಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ನೂತನ ಮುಖ್ಯಶಿಕ್ಷಕ ನಂ.ರಾಜು ಮಾತನಾಡಿ, ಶಾಲೆಯ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಶಾಲೆಗೆ ಹೊಸದಾಗಿ ಬಂದ ನನ್ನನ್ನು ಗೌರವಯುತ ಸ್ವಾಗತ ಕೋರಿರುವುದು ಸಂತೋಷ ತಂದಿದೆ ಎಂದರು.
ಎಸ್.ಡಿ.ಎಂ.ಸಿ. ಹಾಗೂ ಹಳೇ ವಿದ್ಯಾರ್ಥಿಗಳು ಶಾಲೆಯ ಮೇಲಿಟ್ಟಿರುವ ಪ್ರೀತಿ, ಮೆಚ್ಚುವಂತಹುದಾಗಿದೆ. ಮುಖ್ಯಶಿಕ್ಷಕನಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಪ್ರಗತಿಗೆ ದುಡಿಯುವ ಭರವಸೆ ನೀಡುತ್ತೇನೆ ಎಂದರು.
ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವ ಮನಸ್ಸು ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಸಿಗುವ ಉಚಿತ ಸೌಲಭ್ಯದೊಂದಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದ ಅವರು, ಶಾಲೆಗೆ ಮಕ್ಕಳನ್ನು ದಾಖಲಿಸಲು ಪಟ್ಟಣದ ದೂರದ ಬಡವಾಣೆಗಳವರು ಆಸಕ್ತಿ ವಹಿಸಿದ್ದು, ಮಕ್ಕಳನ್ನು ಶಾಲೆಗೆ ಕರೆತರುವ, ಪುನಃ ಮನೆಗೆ ಕಳಿಸಿಕೊಡಲು ವೈಯಕ್ತಿಕವಾಗಿ ಆಟೋ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪುಷ್ಪಾವತಿ, ನೇತ್ರಾವತಿ, ಸವಿತ, ಹಳೇ ವಿದ್ಯಾರ್ಥಿಗಳಾದ ಸತೀಶ್, ಗಿರೀಶ್ ಕೆ ಭಟ್, ಕೃಷ್ಣಮೂರ್ತಿ, ನವೀನ್ ಹಾಗೂ ವಿದ್ಯಾರ್ಥಿಗಳಿದ್ದರು.
ವರದಿ: ಗಿರೀಶ್ ಕೆ ಭಟ್