ಸಿರುಗುಪ್ಪ:-ನಗರದ ತಾಲೂಕು ಕಛೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಸಮಿತಿಯಿಂದ ತಾಲೂಕಿನಲ್ಲಿ ಹರಿಯುವ ವೇದಾವತಿ(ಹಗರಿ) ನದಿಗೆ ನೀರು ಬಿಡಲು ನದಿ ಜೋಡಣೆ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ್ ಹೆಚ್.ವಿಶ್ವನಾಥ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಜೆ.ಸಿದ್ದರಾಮನಗೌಡ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ವಿ.ಮಾರುತಿ ಮಾತನಾಡಿ ತಾಲೂಕಿನಲ್ಲಿ ಮಳೆಯಾಗದ ಕಾರಣ ವೇದಾವತಿ(ಹಗರಿ) ನದಿಗೆ ನೀರಿಲ್ಲದೇ ನದಿಪಾತ್ರದ ಹಲವಾರು ಹಳ್ಳಿಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನಾನುಕೂಲವಾಗಿರುತ್ತದೆ
ಅಲ್ಲದೇ ರೈತರ ಬೆಳೆಗಳಿಗೆ ನೀರು ಹಾಯಿಸಲು ಬಹಳ ಕಷ್ಟಕರವಾಗಿರುತ್ತದೆ. ಆದ್ದರಿಂದ ಈ ನದಿಗೆ ಮಣ್ಣೂರು ಸೂಗೂರು ಹಳ್ಳದ ಮಾರ್ಗವಾಗಿ ತುಂಗಾಭದ್ರ ನದಿಯಿಂದ ನೀರು ಬಿಡಲು ಬೈರಾಪುರ ಮಾರ್ಗವಾಗಿ ವೇದಾವತಿ ನದಿಗೆ ಜೋಡಣೆ ಮಾಡಬೇಕು.
ಇದರಿಂದ ನದಿಪಾತ್ರದ ಗ್ರಾಮಗಳಾದ ಗೋಸಬಾಳ, ಮೈಲಾಪುರ, ಬಲಕುಂದಿ, ಮುದೇನೂರು, ಕೋಟೆಹಾಳ್, ಕೆ.ಸೂಗೂರು, ಬೆಂಚಿಕ್ಯಾಂಪ್, ಅರಳಿಗನೂರು, ಬಗ್ಗೂರು, ಶ್ರೀನಗರ ಕ್ಯಾಂಪ್, ಚಾಣಕನೂರು, ಕರ್ಚಿಗನೂರು, ಗಜಗಿನಹಾಳ್, ಶಾಲಿಗನೂರು, ರಾರಾವಿ, ತೊಂಡೆಹಾಳ್, ಟಿ.ರಾಂಪುರ, ಕುರುವಳ್ಳಿ, ನಾಗಲಾಪುರ, ಕುಡುದರಹಾಳ್ ಇನ್ನಿತರ ಗ್ರಾಮಗಳ ಜನಜನಾವಾರುಗಳಿಗೆ ಅನುಕೂಲವಾಗುತ್ತದೆ.
ಆದ್ದರಿಂದ ಈ ಕೂಡಲೇ ನದಿ ಜೋಡಣೆಯ ಕಾರ್ಯವನ್ನು ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಒತ್ತಾಯಿಸಿದರು.
ಇದೇ ವೇಳೆ ರೈತ ಮುಖಂಡರಾದ ಎಮ್.ವಿಜಯಕುಮಾರಗೌಡ, ಹೆಚ್.ಸಣ್ಣ ಹನುಮಂತಪ್ಪ, ಈರಯ್ಯ, ವೀರೇಶ, ಪಂಪನಗೌಡ, ವೀರೇಶಗೌಡ, ಬಗ್ಗೂರಗೌಡ, ಮಲ್ಲಿಗೌಡ, ಬಿ.ಮಲ್ಲಿಗೌಡ, ಬೀಮನಗೌಡ, ಶೇಕ್ಷಾವಲಿ, ಶಿವಕುಮಾರ್ ಇನ್ನಿತರರಿದ್ದರು.
ವರದಿ.ಶ್ರೀನಿವಾಸ ನಾಯ್ಕ