ಅಥಣಿ: ಪ್ರವಾಹದಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳು ಇಂದು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಹುಲಗಬಾಳಿ ಗ್ರಾಮದ ರೈತ ಬಾಳು ಚವ್ಹಾಣ ಮನೆ ನೋಡಲು ಹೋಗಿ ಪ್ರವಾಹದಲ್ಲಿ ತನ್ನ ಜೀವ ಕಳೆದುಕೊಂಡಿದ್ದಾರೆ. ಆದರೆ, ಜೀವ ಕಳೆದುಕೊಂಡ ಕುಟುಂಬದ ಕಣ್ಣೀರೊರೆಸಲು ಯಾರೂ ಧಾವಿಸಿಲ್ಲ ಅನ್ನೋದು ಮತ್ತೊಂದು ದುರಂತ. ಎದೆ ಎತ್ತರಕ್ಕೆ ಬೆಳೆದ ಮೂವರು ಮಕ್ಕಳ ಉನ್ನತ ಶಿಕ್ಷಣ ಹಾಗೂ ಬಡ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡುವಂತೆ ಮಾಜಿ ಶಾಸಕ ಶಹಾಜಹಾನ ಡೊಂಗರಗಾವ ಮನವಿ ಮಾಡಿದ್ದಾರೆ.
ಮತ್ತೊಂದೆಡೆ ಬಾಳು ಚವ್ಹಾಣ ಸಾವಿಗೆ ಇತ್ತ ಸ್ಥಳೀಯ ಗ್ರಾಮ ಪಂಚಾಯತ್ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಹುಲಗಬಾಳಿ ಗ್ರಾಮ ಪಂಚಾಯತ್ ವಿರುದ್ಧ ಕಿಡಿ ಕಾರಿದ್ದಾರೆ. ಕಾರಣ ನರೇಗಾ ಯೋಜನೆಯಲ್ಲಿ ನಿರ್ಮಾಣ ಮಾಡಬೇಕಿದ್ದ ರಸ್ತೆ ಅಭಿವೃದ್ಧಿ ಕಾರ್ಯಗಳು ಕಳಪೆ ಮಟ್ಟದ್ದಾಗಿದ್ದು, ಸುಮಾರು ಎರಡು ಅಡಿ ಎತ್ತರ ಮುರಮಿಕರ ಮಾಡಿದ್ದರೆ ಇವತ್ತು ಸುಗಮ ದಾರಿ ಯಾಗುತ್ತಿತ್ತು. ದಾರಿಯಿಲ್ಲದೆ ಬಾಳು ಚವ್ಹಾಣ ಜೀವ ಹೋಗಿದೆ ಎಂಬ ಆರೋಪ ಕೇಳಿಬಂದಿದೆ.
ಅನ್ನದಾತರ ಕಷ್ಟ ಒಂದಾ, ಎರಡಾ? ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕೆಲ ಬೆಳೆಗಳು, ಭಾರಿ ಪ್ರವಾಹದಲ್ಲಿ ಕೊಚ್ಚಿ ಹೋದರೆ ಕಬ್ಬು, ಮುಸುಕಿನ ಜೋಳ ಕೊಳೆತು
ನಾಶವಾಗಿವೆ. ನೆರೆಯ ನೀರು ಕಡಿಮೆ ಆದ ಕಾರಣ ನದಿಪಾತ್ರದ ಜನರಲ್ಲಿ ಮತ್ತೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ನದಿನೀರು ತ್ಯಾಜ್ಯವಸ್ತುಗಳು ಹಾಗೂ ಸತ್ತ ಮೀನುಗಳ ವಾಸನೆಯಿಂದ ಗಬ್ಬೆದ್ದು ನಾರುತ್ತಿದ್ದು, ಜನರು ಹೈರಾಣಾಗಿದ್ದಾರೆ. ಗ್ರಾಮಗಳಲ್ಲಿ ರೋಗನಾಶಕ ( ಬೀಚಿಂಗ್ ) ಸಿಂಪಡಣೆ ಮಾಡಬೇಕಿದ್ದ ಸ್ಥಳೀಯ ಪಂಚಾಯಿತಿಗಳು ಕಾಟಾಚಾರದ ಪ್ರದರ್ಶನ ಮಾಡುತ್ತಿವೆ ಅನ್ನೋದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.
ವರದಿ: ತುಕುರಾಮ ಚೌಗಲಾ