ಬೆಳಗಾವಿ : ಭಾರತದ ಸ್ವಾತಂತ್ರ್ಯದ ಬಳಿಕ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶಕ್ಕೆ ಪ್ರತಿಯೊಬ್ಬರ ಕೊಡುಗೆ ಶ್ಲಾಘನೀಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ರವೀಂದ್ರನಾಥ ಕದಂ ಅವರು ತಿಳಿಸಿದರು.
ನಗರದ ಬೆನೆನ್ ಸ್ಮಿಥ್ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳಾದ ತಾವು ದೇಶದ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡುವ ಕಡೆಗೆ ಗಮನ ಹರಿಸಬೇಕು. ಪ್ರಸ್ತುತ ಭಾರತ ಬೇರೆ ದೇಶಗಳಿಗೆ ಆಹಾರ ನೀಡುವಷ್ಟು, ಮಂಗಳ ಗೃಹ, ಚಂದ್ರನ ಅಂಗಳಕ್ಕೆ ಪ್ರವೇಶಸುವಷ್ಟು ಸಾಧನೆಗೈದಿದ್ದೇವೆ. ನಮ್ಮ ದೇಶ ಬಡ ರಾಷ್ಟ್ರವಲ್ಲ, ಹಿಂದುಳಿದ ರಾಷ್ಟ್ರವಲ್ಲ, ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ ಎಂದರು.
ಪಾಶ್ಚಿಮಾತ್ಯ ದೇಶಗಳಲ್ಲಿ ಸಾವಿರ ಜನರಿಗೆ ಒಬ್ಬ ವೈದ್ಯರಿದ್ದಾರೆ. ಆದರೆ ನಮ್ಮ ದೇಶದಲ್ಲಿ ಒಬ್ಬ ವೈದ್ಯ 10 ಸಾವಿರ ಜನರಿಗೆ ಚಿಕಿತ್ಸೆ ನೀಡುವಷ್ಟು ಜ್ಞಾನವುಳ್ಳವರಾಗಿದ್ದಾರೆ ಎಂಬ ಹೆಮ್ಮೆ ನಮ್ಮರಿಗಬೇಕು. ಮೊದಲು ನಮ್ಮ ದೇಶದ ಬಗ್ಗೆ ಅಭಿಮಾನ, ಭಕ್ತಿ, ಹೆಮ್ಮೆ ಹೊಂದುವುದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ರವೀಂದ್ರನಾಥ ಕದಂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೆನನ್ ಸ್ಮಿಥ್ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯದ ಎನ್ಸಿಸಿ ಕ್ಯಾಪಯ ಡಾ.ಎಚ್.ಎನ್.ಚುಳಕಿ ಮಾತನಾಡಿ, ಗುರು ಎಂದರೆ ಬಾವಿಯಲ್ಲಿ ಬಿಟ್ ಕೊಡದಂತಿರಬೇಕು. ನೀರು ಪಡೆಯಲು ಬಾಗಬೇಕು. ಬಳಿಕ ಪಡೆದ ಜ್ಞಾನವನ್ನು ವಿದ್ಯಾರ್ಥಿಗಳ ನೀಡುವಾಗ ಬಾಗಬೇಕು. ಆಗಲೇ ಒಬ್ಬ ಶ್ರೇಷ್ಠ ಗುರುವಾಗಲು ಸಾಧ್ಯ. ಅದೇ ರೀತಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಗುರುವಿನ ಗುಲಾಮನಂತಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಿರಿಯ ಉಪನ್ಯಾಸಕ ಡಾ.ಮನೋಹರ ತಳ್ಳಿಮನಿ ಅವರು ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತವಾಗಿ ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಪ್ರಾಚಾರ್ಯ ಸಾಮುವೇಲ್ ಡ್ಯಾನಿಯೇಲ್, ರಾಜೇಶ್ವರಿ ಚನ್ನಮಿಲ್ಲಾ, ಪ್ರತಿಭಾ ಭಾವಿಕಟ್ಟಿ ಸೇರಿದಂತೆ ಇತರಿದ್ದರು.