ಬೆಂಗಳೂರು: ಬಟ್ಟೆ ಖರೀದಿಸುವ ವಿಚಾರಕ್ಕೆ ದಂಪತಿ ನಡುವೆ ಗಲಾಟೆಯಾಗಿದ್ದು, ವಿಕೋಪಕ್ಕೆ ತಿರುಗಿ ಪತ್ನಿಯನ್ನೇ ಪತಿ ಹತ್ಯೆ ಮಾಡಿದ್ದಾನೆ.
ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 27 ವರ್ಷದ ಕಾವ್ಯಾ ಅವರನ್ನು ಪತಿ ಶಿವಾನಂದ ಹತ್ಯೆ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ಘಟನೆ ನಡೆದಿದೆ.
ಪತ್ನಿ ಕಾವ್ಯಾ ಹತ್ಯೆಗೈದು ಪತಿ ಶಿವಾನಂದ ಪರಾರಿಯಾಗಿದ್ದ. ಕಾವ್ಯಾ ಪೋಷಕರ ದೂರಿನ ಅನ್ವಯ ಶಿವಾನಂದನನ್ನು ಬಂಧಿಸಲಾಗಿದೆ. ತಿಂಗಳ ಹಿಂದೆ ಗಲಾಟೆ ಮಾಡಿ ಕಾವ್ಯಾ ತವರುಮನೆ ಸೇರಿದ್ದರು.
ವಾರದ ಹಿಂದೆಯಷ್ಟೇ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಹಬ್ಬಕ್ಕೆ ಬಟ್ಟೆ ಕೊಡಿಸುತ್ತೇನೆ ಎಂದು ಹೇಳಿ ಕೊಡಿಸಿರಲಿಲ್ಲ ಎಂದು ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಸಿಟ್ಟಿಗೆದ್ದು ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.