ತುರುವೇಕೆರೆ: –ಗ್ರಾಮೀಣ ಜನತೆ ತಮ್ಮ ಹಾಗೂ ಗ್ರಾಮದಲ್ಲಿನ ಕುಂದುಕೊರತೆ, ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲೆಂದೇ ಆಯೋಜಿಸಲಾಗುವ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಕೊರತೆ ಕಂಡುಬಂದಿದ್ದು, ನೋಡಲ್ ಅಧಿಕಾರಿ ಸಭೆಯನ್ನು ಮುಂದೂಡಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.
ಸೊರವನಹಳ್ಳಿ ಗ್ರಾಮ ಪಂಚಾಯ್ತಿ ಹೊಣಕೆರೆ ಗೊಲ್ಲರಹಟ್ಟಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಸಾರ್ವಜನಿಕರು, ಗ್ರಾಮಸ್ಥರ ಕೊರತೆ ಕಂಡುಬಂದಿದ್ದು, ಸಭೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯ ಕೊರತೆ ಇತ್ತು ಎಂಬುದು ಕಂಡುಬಂದಿದೆ. ಪಂಚಾಯ್ತಿ ಅಧಿಕಾರಿಗಳು ಸಭೆಯ ಬಗ್ಗೆ ಸೂಕ್ತ ಪ್ರಚಾರ ನಡೆಸಿದ್ದರೆ ಸಭೆಯಲ್ಲಿ ನಾಗರೀಕರು ಉಪಸ್ಥಿತರಿದ್ದು ತಮ್ಮ ಅಹವಾಲುಗಳನ್ನು ಸಲ್ಲಿಸುತ್ತಿದ್ದರು. ಆದರೆ ಪ್ರಚಾರದ ಕೊರತೆ ಹಾಗೂ ಸಭೆಯ ಬಗ್ಗೆ ಮಾಹಿತಿ ಕೊರತೆಯ ಕಾರಣ ಸಭೆಯಲ್ಲಿ ಬೆರಳೆಣಿಕೆಯಷ್ಟು ಗ್ರಾಮಸ್ಥರು ಮಾತ್ರ ಉಪಸ್ಥಿತರಿದ್ದರು. ಇದರಿಂದ ಸಭೆಗೆ ಬಂದಿದ್ದ ನೋಡಲ್ ಅಧಿಕಾರಿ ಸಭೆಯಲ್ಲಿ ಕೋರಂ ಕಡಿಮೆಯ ಕಾರಣ ನೀಡಿ ಸಭೆಯನ್ನು ಮುಂದೂಡಿದ್ದಾರೆ.
ಗ್ರಾಮ ಸಭೆಯ ಬಗ್ಗೆ ಹೆಚ್ಚು ಪ್ರಚಾರ ನಡೆಸಬೇಕು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ನೋಡಲ್ ಅಧಿಕಾರಿ, ಇಂದಿನ ಗ್ರಾಮ ಸಭೆಯನ್ನು ರದ್ದುಗೊಳಿಸಿ ಸೆಪ್ಟಂಬರ್ 30 ನೇ ತಾರೀಖಿಗೆ ಮತ್ತೊಮ್ಮೆ ಗ್ರಾಮಸಭೆಗೆ ದಿನಾಂಕ ನಿಗದಿಪಡಿಸಿ ಎಂದು ತಿಳಿಸಿದರು.
ಇದೇ ವೇಳೆ ಬೆರಳೆಣಿಕೆಯಷ್ಟೇ ಇದ್ದ ಸಾರ್ವಜನಿಕರು, ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ತರಾಟೆ ತೆಗೆದುಕೊಂಡರು. ಈ ವೇಳೆ ಮಧ್ಯಪ್ರವೇಶಿಸಿದ ನೋಡಲ್ ಅಧಿಕಾರಿಗಳು, ಸಭೆಯಲ್ಲಿ ಕೋರಂ ಕಡಿಮೆ ಇರುವ ಕಾರಣ ಈ ಗ್ರಾಮ ಸಭೆ ರದ್ದು ಮಾಡಲಾಗಿದೆ ಇಲ್ಲಿ ಯಾವುದೇ ಚರ್ಚೆಗಳನ್ನು ಮಾಡಲು ಸಾಧ್ಯವಿಲ್ಲ. ಮುಂದಿನ ಗ್ರಾಮ ಸಭೆಯಲ್ಲಿ ನಿಮ್ಮ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿ ಅಲ್ಲಿಂದ ತೆರಳಿದರು.
ಒಟ್ಟಾರೆ ಇಂದು ಗ್ರಾಮ ಸಭೆ ಅಂತೂ ರದ್ದಾಗಿದ್ದು, ದಿನಾಂಕವು ಸಹ ನಿಗದಿಯಾಗಿದ್ದು, ಯಾವ ಗ್ರಾಮದಲ್ಲಿ ಸಭೆ ನಡೆಯಬೇಕೆಂಬುದು ಗ್ರಾಮ ಪಂಚಾಯಿತಿಯಲ್ಲಿ ಸರ್ವ ಸದಸ್ಯರ ಸಭೆ ನಡೆದ ಬಳಿಕವೇ ಗೊತ್ತಾಗಲಿದೆ ಎಂದು ತಿಳಿದುಬಂದಿದೆ.
ವರದಿ: ಗಿರೀಶ್ ಕೆ ಭಟ್