ಬೆಂಗಳೂರು: ಅನ್ಯ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ಕರ್ನಾಟಕದಲ್ಲಿಯೂ ದರ ಪರಿಷ್ಕರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದಂತೆ ದುಬಾರಿ ಮದ್ಯಗಳ ದರ ಆಗಸ್ಟ್ 27 ರಿಂದಲೇ ಶೇಕಡ 15 ರಿಂದ 20 ರಷ್ಟು ಇಳಿಕೆಯಾಗಲಿದೆ.
ಆದರೆ ಅಗ್ಗದ ಮದ್ಯಗಳ ದರ ಏರಿಕೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮೊದಲಾದ ರಾಜ್ಯಗಳಲ್ಲಿ ದುಬಾರಿ ಬೆಲೆಯ ಮದ್ಯಗಳ ದರ ಕಡಿಮೆ ಇದೆ.
ಕರ್ನಾಟಕದಲ್ಲಿ ದರ ಹೆಚ್ಚಾಗಿರುವುದರಿಂದ ಗಡಿಭಾಗದ ಜನ ಪಕ್ಕದ ರಾಜ್ಯಗಳಲ್ಲಿ ಮದ್ಯ ಖರೀದಿಸುತ್ತಿದ್ದಾರೆ. ಹೀಗಾಗಿ ನೆರೆ ರಾಜ್ಯಗಳ ಬೆಲೆ ನೋಡಿಕೊಂಡು ಸರ್ಕಾರ ದರ ಪರಿಷ್ಕರಣೆಗೆ ಮುಂದಾಗಿದ್ದು, ಬಜೆಟ್ ನಲ್ಲಿ ಸಿಎಂ ಈ ಬಗ್ಗೆ ಘೋಷಣೆ ಮಾಡಿದ್ದರು.
ಎರಡು ತಿಂಗಳ ಹಿಂದೆಯೇ ದರ ಪರಿಷ್ಕರಣೆ ಜಾರಿ ಆಗಬೇಕಿತ್ತು. ಆದರೆ, ಒಪ್ಪಿಗೆ ದೊರೆತಿರಲಿಲ್ಲ. ಈಗ ಒಪ್ಪಿಗೆ ನೀಡಿದ್ದು, ಇಂದಿನಿಂದ ದುಬಾರಿ ಮದ್ಯಗಳ ದರ ಶೇಕಡ 15 ರಿಂದ 20 ರಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.