ಬೆಳಗಾವಿ :-ಈ ವರ್ಷ ಉತ್ತಮ ಮಳೆಯಾದ ಕಾರಣ ರಾಜ್ಯದ ಅಣೆಕಟ್ಟೆಗಳು ಭರ್ತಿಯಾಗಿ, ಕೆರೆ ಕಟ್ಟೆಗಳು ತುಂಬಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇ ಬಾಗೇವಾಡಿಯ ಜೀವನಾಡಿ ಸಿದ್ಧನಭಾವಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಸಚಿವರು, ಹಿರೇ ಬಾಗೇವಾಡಿ ಹಾಗೂ ಸುತ್ತಮತ್ತಲಿನ ಗ್ರಾಮಗಳ ಬಹುದಿನಗಳ ಬೇಡಿಕೆಯಾಗಿದ್ದ ಸಿದ್ಧನಭಾವಿ ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದ್ದು, ಇಂದು ಗಂಗಾಮಾತೆಗೆ ಬಾಗಿನ ಅರ್ಪಿಸಿರುವುದು ಖುಷಿ ತಂದಿದೆ ಎಂದರು.
ಸಿದ್ಧನಭಾವಿ ಕೆರೆಯ ನೀರು ಸಂಗ್ರಹದಿಂದಾಗಿ ಬೋರವೆಲ್ ಗಳ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದ ಜನರಿಗೆ, ಜಾನುವಾರುಗಳಿಗೆ, ಸುತ್ತಮುತ್ತಲಿನ ರೈತರಿಗೆ ಸಹಾಯವಾಗಲಿದೆ. ಈ ಮೊದಲು ಕೆರೆ ತುಂಬಿಸುವ ಭರವಸೆ ನೀಡಿದ್ದೆ, ಇದೀಗ ನುಡಿದಂತೆ ಕೆರೆ ತುಂಬಿಸುವ ಕಾರ್ಯ ಮಾಡಲಾಗಿದೆ. 19 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವರ್ಷ ಉತ್ತಮ ಮಳೆಯಾದ ಪರಿಣಾಮ ಇವತ್ತು ಎಲ್ಲ ಕೆರೆ ಕಟ್ಟೆಗಳು ತುಂಬಿದ್ದು, ರೈತರ ಮುಖದಲ್ಲಿ ಹರ್ಷದ ಹೊನಲು ಮೂಡಿದೆ. ಹಿರೇ ಬಾಗೇವಾಡಿ ಭಾಗದ ಜನರು ನನಗೆ ಹಿಂದಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಈ ಭಾಗದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಹಿರೇ ಬಾಗೇವಾಡಿ ಗ್ರಾಮದ 80 ಎಕರೆ ಜಮೀನು ವಿಶ್ವವಿದ್ಯಾಲಯಕ್ಕೆ ಹೋಗಿದ್ದು, ಸಿಎಂ, ಉನ್ನತ ಶಿಕ್ಷಣ ಸಚಿವರ ಹತ್ತಿರ ಮಾತನಾಡಿ ಮಲ್ಲಯ್ಯನ ಗುಡ್ಡದಲ್ಲಿ ಗ್ರಾಮಸ್ಥರಿಗಾಗಿ 10 ಎಕರೆ ವಾಪಸ್ ಪಡೆಯಲಾಗುವುದು. ಜೊತೆಗೆ ಆ ಜಮೀನಿನಲ್ಲಿ ಮಲ್ಲಯ್ಯನ ದೇವಸ್ಥಾನವನ್ನು ನಿರ್ಮಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕೆರೆಗೆ ಬಾಗಿನ ಅರ್ಪಿಸಿರುವುದು ನನ್ನ ಅದೃಷ್ಟ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹಿರೇ ಬಾಗೇವಾಡಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗುವುದು ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಜಾಲಿಕರೆಮ್ಮದೇವಿ ಆರಾಧಕರಾದ ಉಳವಪ್ಪ ಅಜ್ಜನವರು, ಗಂಗಯ್ಯ ಸ್ವಾಮಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಸಿ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ಮಿತಾ ಪಾಟೀಲ, ಉಪಾಧ್ಯಕ್ಷರಾದ ಪುಷ್ಪ ನಾಯ್ಕರ್, ಸುರೇಶ್ ಇಟಗಿ, ಗೌಸಮೊದ್ದಿನ್ ಜಾಲಿಕೊಪ್ಪ, ಅನಿಲ ಪಾಟೀಲ, ಶ್ರೀಕಾಂತ ಮಾಧುಭರಮಣ್ಣವರ, ಅಡಿವೇಶ್ ಇಟಗಿ, ಪಡಿಗೌಡ ಪಾಟೀಲ, ಶಿಪು ಹಳೇಮನಿ, ಪ್ರಕಾಶ ಜಪ್ತಿ, ಖತಾಲ್ ಗೋವೆ, ಮಹಾಂತೇಶ್ ಹಂಚಿನಮನಿ, ನಿಂಗಪ್ಪ ತಳವಾರ, ಆನಂದ ಪಾಟೀಲ, ಅಡಿವೆಪ್ಪ ತೋಟಗಿ, ಆನಂದ ಪಾಟೀಲ, ರಘು ಪಾಟೀಲ ಗ್ರಾಮದ ನೂರಾರು ಮಹಿಳೆಯರು, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ವರದಿ :-ಪ್ರತೀಕ ಚಿಟಗಿ