ಸಿರುಗುಪ್ಪ : ತಾಲೂಕಿನ ಕೆಂಚನಗುಡ್ಡ ಗ್ರಾಮದ ಐತಿಹಾಸಿಕ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ ಗುಡ್ಡದ ಮೇಲ್ಭಾಗದಲ್ಲಿ ಅರೆಬರೆ ಕಾಮಗಾರಿಯಿಂದ ನಿರ್ಮಿಸಲಾಗಿರುವ ಪ್ರವಾಸಿ ಮಂದಿರ ಕಟ್ಟಡವು ಅನೈತಿಕ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ.
ಈಗಿನ ಮಾಜಿ ಸಚಿವ ಜನಾರ್ಧನರೆಡ್ಡಿ ಅವರು ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದಾಗ ಅನುದಾನವನ್ನು ತಂದು ಐತಿಹಾಸಿಕ ದೇಗುಲದ ನವೀನತೆ, ಮತ್ತು ಸುತ್ತಲಿನ ಜಾಗದಲ್ಲಿ ವನ್ಯ ಜೀವಿಗಳ ಉದ್ಯಾನವನ ನಿರ್ಮಿಸುವ ಭರವಸೆ ನೀಡಿದ್ದರು.
ಪ್ರವಾಸಿಗರ ಈರ್ಷೆಯನ್ನು ಇಮ್ಮಡಿಗೊಳಿಸಿದ್ದ ಕಲ್ಪನೆ ಕೇವಲ ಕನಸಾಗಿಯೇ ಉಳಿದೆಂದರೆ ತಪ್ಪಾಗಲಾರದು. ಇಲಾಖೆಯ ಉತ್ಸಾಹದೊಂದಿಗೆ ಕೋಟಿಗಟ್ಟಲೆ ಅನುದಾನದಲ್ಲಿ ನದಿತೀರದ ಬೆಟ್ಟದ ಮೇಲೊಂದು ಪ್ರವಾಸಿ ಮಂದಿರದ ಭವ್ಯ ಬಂಗಲೆ ತಲೆಯೆತ್ತಿದೆ.ಆದರೆ ಅರ್ಧಕ್ಕೆ ನಿಂತ ಕಾಮಗಾರಿಯಿಂದಾಗಿ ಪ್ರಯೋಜನಕ್ಕೆ ಮುನ್ನವೇ ನಿಷ್ಪçಯೋಜಕವಾಗಿದೆ.
ಮದ್ಯಪ್ರಿಯರ ಇಸ್ಪೇಟ್ ಜೂಜುಕೋರರ ಅನೈತಿಕ ಚಟುವಟಿಕೆಯ ಕೇಂದ್ರವಾಗಿದೆ. ಸರ್ಕಾರದ ಸಂಬಳಕ್ಕೆ ಮಾತ್ರ ಸೀಮಿತವಾಗಿರುವ ಅರೆಬರೆ ಕಟ್ಟಡವು ಅಧಿಕಾರಿಗಳ ನಿರ್ಲಕ್ಷತೆಯಿಂದ ಕುರಿಗಳು ಮಲಗುವ ಮಂದೆಯಾಗಿದೆಂದರೆ ತಪ್ಪಾಗಲಾರದು.
ಮಳೆಗಾಲದಲ್ಲಿ ನದಿಯ ಸೊಬಗಿನ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸುರಕ್ಷತೆಯಿಲ್ಲದ ಕಟ್ಟಡವು ಅಪಾಯವನ್ನು ತಂದೊಡ್ಡಿದ್ದು, ಗಾಢ ನಿದ್ರೆಯಲ್ಲಿನ ಅಧಿಕಾರಿಗಳು ಎಚ್ಚರವಹಿಸಬೇಕಾಗಿದೆ.
ಎಂಟು ಕೊಠಡಿಗಳಿಂದ ನಿರ್ಮಿತವಾಗಿರುವ ಬಹು ನಿರೀಕ್ಷಿತ ಕಟ್ಟಡದಲ್ಲಿ ಕುರಿಗಳ ಇಕ್ಕೆ, ಮದ್ಯದ ತ್ಯಾಜ್ಯದ ಗಾಜುಗಳು, ಪಾರ್ಟಿಗೆಂದು ಬರುವ ಕೆಲವರು ಒಲೆ ಉರಿಸಿ ಅಡುಗೆ ತಯಾರಿಸುವ ಕೋಣೆಗಳಾಗಿವೆ. ಇಸ್ಪೀಟ್ ಎಲೆಗಳು ಇಲ್ಲಿ ಕಾಣಸಿಗುತ್ತಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಸರ್ಕಾರದ ಹಣ ಅಧಿಕಾರಿಗಳ ಮತ್ತು ಗುತ್ತಿಗೆದಾರರಿಗೆ ಅಥವಾ ಯರ‍್ದೋ ದುಡ್ಡು ಯಲ್ಲಮ್ಮ ಜಾತ್ರೆ ಎನ್ನುವಂತಾಗಿದೆ ಈ ಕಟ್ಟಡದ ಪರಿಸ್ಥಿತಿ.
ಇನ್ನು ಮುಂದಾದರೂ ಸಂಬಂದಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳು ಗಮನವಹಿಸಿ ಸುಂದರ ವಾತಾವರಣದ ನಿರ್ಮಾಣಕ್ಕೆ ಮುಂದಾಗಬೇಕು. ಸುಸಜ್ಜಿತ ಕಟ್ಟಡವಾಗಿ ಪರಿವರ್ತನೆಯಾಗಬೇಕು. ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಬೇಕೆಂಬುದು ಪ್ರವಾಸಿಗರ ಒತ್ತಾಯವಾಗಿದೆ.
ವರದಿ : ಶ್ರೀನಿವಾಸ ನಾಯ್ಕ