ತುರುವೇಕೆರೆ: -ತಾಲ್ಲೂಕಿನ ಮುನಿಯೂರು ಗ್ರಾಮ ಪಂಚಾಯ್ತಿಗೆ ಸೇರಿದ ನಿಟ್ಟೂರು ರಸ್ತೆಯ ಬಳಿಯಿರುವ ಕುಡಿಯುವ ನೀರಿನ ಟ್ಯಾಂಕ್ ಬಳಿ ಸ್ವಚ್ಛತೆ ಮರೀಚಿಕೆಯಾಗಿದ್ದು, ನಾಗರೀಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನವೇ ಸ್ಥಳೀಯ ಗ್ರಾಮ ಪಂಚಾಯ್ತಿ ಎಚ್ಚೆತ್ತುಕೊಂಡು ಟ್ಯಾಂಕ್ ಬಳಿ ಸ್ವಚ್ಛಗೊಳಿಸಬೇಕಿದೆ ಎಂದು ಮುನಿಯೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈಗಾಗಲೇ ಎಲ್ಲೆಡೆ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದ್ದು, ಜನತೆ ಆತಂಕದಲ್ಲಿದ್ದಾರೆ. ಕುಡಿಯುವ ನೀರು ಕಲುಷಿತಗೊಂಡರೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ನಿಟ್ಟೂರು ರಸ್ತೆ ಬಳಿಯಿರುವ ಮುನಿಯೂರು ಪಂಚಾಯ್ತಿಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ಬಳಿ ಸಾಕಷ್ಟು ಗಿಡಗಂಟೆಗಳು ಬೆಳೆದಿವೆ, ಪಕ್ಕದ ಚರಂಡಿಯಲ್ಲಿ ಘನತ್ಯಾಜ್ಯಗಳು ಬಿದ್ದು ಗಬ್ಬುನಾರುತ್ತಿದೆ. ಆದರೂ ಸಹ ಪಂಚಾಯ್ತಿ ಈ ಕಡೆ ಗಮನಹರಿಸಿಲ್ಲ. ಇದರಿಂದ ನೀರು ಕಲುಷಿತಗೊಂಡು ಟ್ಯಾಂಕ್ ಸುತ್ತಮುತ್ತ ಸ್ಥಳ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟು ರೋಗರುಜಿನಗಳು ಹರಡುವ ಸಾಧ್ಯತೆಗಳಿವೆ.
ಆದ್ದರಿಂದ ಸ್ಥಳೀಯ ಮುನಿಯೂರು ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತ ಗಮನಹರಿಸಿ ಟ್ಯಾಂಕ್ ಬಳಿ ಸ್ವಚ್ಛತೆಗೊಳಿಸಿ, ಸಾಂಕ್ರಾಮಿಕ ರೋಗ ಹರಡದಂತೆ ರಾಸಾಯನಿಕ ಸಿಂಪಡಣೆ ಮಾಡಬೇಕು, ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್