ಸಿರುಗುಪ್ಪ : -ನಗರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪೋಲೀಸ್ ಇಲಾಖೆ ವತಿಯಿಂದ ನಡೆದ ಶ್ರೀಗೌರಿ ಗಣೇಶ ಮತ್ತು ಈದ್‌ಮಿಲಾದ್ ಹಬ್ಬಗಳ ಶಾಂತಿ ಸಭೆಯನ್ನುದ್ದೇಶಿಸಿ ಎಸ್.ಪಿ. ಡಾ.ಶೋಭಾರಾಣಿ.ವಿ.ಜೆ ಅವರು ಮಾತನಾಡಿದರು.
ಧಾರ್ಮಿಕತೆಯ ಹಬ್ಬಗಳನ್ನು ಶ್ರದ್ದಾ ಭಕ್ತಿಯಿಂದ ಆಚರಿಸಬೇಕಿದೆ. ಗಣೇಶನ ಪ್ರತಿಷ್ಟಾಪನೆಗೆ ಅನುಮತಿ ಕಡ್ಡಾಯವಾಗಿದ್ದು, ಪರ್ಮಿಷನ್‌ಗಾಗಿ ವಿವಿಧ ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸಲು ಒಂದು ಕಡೆಯಲ್ಲಿ ಅನುಮತಿ ನೀಡುವ ಕೇಂದ್ರವನ್ನು ಅಳವಡಿಸಲಾಗುತ್ತದೆ.
ಗಣೇಶನ ಪ್ರತಿಷ್ಟಾಪನೆಯ ಸ್ಥಳದಲ್ಲಿ ಮಹಿಳೆಯರು, ಮಕ್ಕಳು, ವೃದ್ದರು ಪೂಜೆಗೆಂದು ಬರುತ್ತಾರೆ. ರಾತ್ರಿ ವೇಳೆ ವಿದ್ಯುತ್ ಬೆಳಕಿನ ಸೌಲಭ್ಯವಿರಬೇಕು. ಕೂರಿಸಿದ ದಿನದಿಂದ ವಿಸರ್ಜನೆಯವರೆಗೂ ಸುರಕ್ಷತಾ ಮುಂಜಾಗ್ರತೆ ಆಯೋಜನೆಯ ವ್ಯವಸ್ಥಾಪಕರು ವಹಿಸಬೇಕು.
ಸಾರ್ವಜನಿಕರ ಹಿತದೃಷ್ಟಿಯಿಂದ ಡಿಜೆ ನಿಷೇದಿಸಲಾಗಿದೆ. ನಮ್ಮ ಇಲಾಖೆಯೊಂದಿಗೆ ಅರಣ್ಯ, ಜೆಸ್ಕಾಂ, ಅಗ್ನಿಶಾಮಕ, ನಗರಸಭೆ ಇನ್ನಿತರ ಇಲಾಖೆಗಳ ಸಲಹೆ ಸೂಚನೆಗಳು ಪಡೆಯುವುದು ಅಗತ್ಯವೆಂದರು.
ಶ್ರೀರಾಮ ಸೇನೆಯ ಮುಖಂಡ ಕಂಬಳಿ ಮಲ್ಲಿಕಾರ್ಜುನ ಮಾತನಾಡಿ ಬ್ರಿಟಿಷರ ವಿರುದ್ದ ಹೋರಾಟ ನಡೆಸಲೆಂದು ಜನರನ್ನು ಒಗ್ಗೂಡಿಸಲು ಸ್ವಾತಂತ್ರ್ಯ ಪೂರ್ವದಿಂದಲೂ ಬಾಲಾ ಗಂಗಾಧರ ತಿಲಕ್ ಅವರು ಈ ಗಣೇಶ ಪ್ರತಿಷ್ಟಾಪನೆಯ ಆಚರಣೆಯನ್ನು ಸಾರ್ವಜನಿಕ ಹಬ್ಬದಂತೆ ಆಚರಿಸಿದ್ದರು.
ಯಾರೋ ಕಿಡಿಗೇಡಿಗಳು, ಎಲ್ಲೋ ನಡೆಯುವ ಘಟನೆಗಳ ಹೋಲಿಕೆ ಮಾಡಿ ಇಂತಹ ಸಾರ್ವಜನಿಕ ಹಬ್ಬಗಳಿಗೂ ಕಾನೂನು ಬಿಗಿಗೊಳಿಸುವುದು ವಿಷಾದನೀಯವೆಂದರು.
ಇದೇ ವೇಳೆ ತಹಶೀಲ್ದಾರ್ ಹೆಚ್.ವಿಶ್ವನಾಥ, ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ, ಇ.ಓ ಪವನ್‌ಕುಮಾರ್ ಎಸ್.ದಂಡಪ್ಪನವರ್, ನಗರಸಭೆ ಆಯುಕ್ತ ಗುರುಪ್ರಸಾದ್, ಡಿವೈಎಸ್‌ಪಿ ವೆಂಕಟೇಶ, ಅಬಕಾರಿ ನಿರೀಕ್ಷಕಿ ಕೀರ್ತನಾ, ಅಗ್ನಿಶಾಮಕ ಪ್ರಭಾರಿ ಠಾಣಾಧಿಕಾರಿ ಆರ್.ಎಲ್.ಪೂಜಾರಿ, ನಗರಸಭೆ ಅಧ್ಯಕ್ಷೆ ರೇಣುಕಮ್ಮ, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್.ಆನಂದಪ್ಪ ಇನ್ನಿತರ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ