ಬೆಂಗಳೂರು : ರಾಜ್ಯದ 7 ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಇಂದು ಲೋಕಾರ್ಪಣೆಗೊಳ್ಳಲಿದೆ.
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಸಮೀಪ ಮುಖ್ಯಮಂತ್ರಿ ಸಿದ್ದರಾಮಯ್ಯ ನೀರೆತ್ತುವ ಕಾರ್ಯಕ್ಕೆ ಚಾಲನೆ ಕಳೆದ ವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಾಯೋಗಿಕ ಚಾಲನೆ ನೀಡಿದ್ದರು.
ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ, ವಂಗದ ಹಳ್ಳದಿಂದ ಬರಪೀಡಿತ ಜಿಲ್ಲೆಗಳಿಗೆ ನೀರು ಒದಗಿಸುವ ಯೋಜನೆ 2014ರಲ್ಲಿ ಶುರುವಾಗಿತ್ತು. 23,251 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಆರಂಭವಾದ ಯೋಜನೆ ಮೊದಲ ಹಂತ ಉದ್ಘಾಟನೆಗೆ ಸಿದ್ಧವಾಗಿದ್ದು, ಇನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೋಜನೆಯಿಂದ ಅನುಕೂಲವಾಗಲಿದೆ. 29 ತಾಲೂಕಿನ 38 ಪಟ್ಟಣ ಪ್ರದೇಶ 2657 ಗ್ರಾಮಗಳ 75.79 ಲಕ್ಷ ಜನರಿಗೆ, ಜಾನುವಾರುಗಳಿಗೆ 14.05 ಟಿಎಂಸಿ ನೀರು ಒದಗಿಸಲಾಗುವುದು.