ವಿಜಯಪುರ : ರಾಜ್ಯಾದ್ಯಂತ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲೆಡೆ ಗಣೇಶ ಮೂರ್ತಿಯನ್ನು ಮೆರವಣಿಗೆ ಡಿಜೆ ಸಾಂಗ್, ತಮಟೆ ಮೂಲಕ ವಿಜೃಂಭಣೆಯಿಂದ ಕೂರಿಸಲಾಗುತ್ತಿದೆ. ಆದರೆ ವಿಜಯಪುರ ಪಾಲಿಕೆ ಕಟ್ಟಡದಲ್ಲಿ ಮಧ್ಯರಾತ್ರಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು, ಸ್ಥಳಕ್ಕೆ ಜಲ ನಗರ ಪೊಲೀಸರು ಭೇಟಿ ನೀಡಿದ್ದಾರೆ.
ವಿಜಯಪುರದ ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾದವ್, ಕಿರಣ್ ಪಾಟೀಲ್, ಶಿವರುದ್ರ ಬಾಗಲಕೋಟೆ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ್ ಮಗೀಮಠ, ಬಂದೇನವಾಜ್ ಬೀಳಗಿ, ಜಮೀರ್ ಬಾಂಗಿ, ಜವಾಹರ್ ಗೋಸ್ವಾಮಿ, ಮಾಜಿ ಸದಸ್ಯ ಸೇರಿದಂತೆ ಇತರರು ಗಣೇಶ ಪ್ರತಿಷ್ಠಾಪನೆ ಮಾಡಲಾಯಿತು.ರಾತ್ರೋರಾತ್ರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಪ್ರತಿ ವರ್ಷವೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡಲಾಗುತ್ತಿತ್ತು. ಪಾಲಿಕೆಯ ಎಲ್ಲ ಸಿಬ್ಬಂದಿಯ ಒಂದು ದಿನದ ವೇತನ ಹಬ್ಬಕ್ಕೆ ನೀಡಲಾಗುತ್ತಿತ್ತು. ಸತ್ಯನಾರಾಯಣ ಪೂಜೆ ಹಾಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿತ್ತು.
ಆದರೆ ಈ ಬಾರಿ ಪಾಲಿಕೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರಲಿಲ್ಲ. ಹಾಗಾಗಿ ರಾತ್ರೋರಾತ್ರಿ ಪಾಲಿಕೆಯ ಸದಸ್ಯರು ಸೇರಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಸದ್ಯ ಸ್ಥಳಕ್ಕೆ ಜಲ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಜಿಬಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಪಾಲಿಕೆಯ ನೆಲಮಡಿಯ ಪ್ರವೇಶ ದ್ವಾರದ ಎದುರು ಪ್ರತಿಷ್ಠಾಪಿಸಲು ತೀರ್ಮಾನ ಮಾಡಲಾಗಿತ್ತು. ಹಾಗಾಗಿ ರಾತ್ರೋರಾತ್ರಿ ಗಣೇಶ್ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗಿದೆ.