ಸಿರುಗುಪ್ಪ :- ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ನದಿ ಸಮೀಪದಲ್ಲಿರುವ ಗುಡ್ಡಗಳಲ್ಲಿ ಅಕ್ರಮವಾಗಿ ನಡೆಯುವ ಮರಂ(ಗರಸು) ಸಾಗಾಣಿಕೆಯಿಂದಾಗಿ ದಿನೇ ದಿನೇ ಗುಡ್ಡಗಳು ಸವೆದು ಇಲ್ಲಿನ ಐತಿಹಾಸಿಕ ಕುರುಹುಗಳು ಅಳಿವಿನಂಚಿನತ್ತ ಸಾಗಿವೆ.
ಗ್ರಾಮದಿಂದ ಶ್ರೀವಸುದೇಂದ್ರ ತೀರ್ಥರ ಸನ್ನಿದಿಗೆ ರಸ್ತೆ ಅಭಿವೃದ್ದಿಗೆಂದು ಶ್ರೀ ಅಡಿವೆಪ್ಪ ತಾತನವರ ಮಠದಿಂದ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದ ಹತ್ತಿರದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಭಾಗದಲ್ಲಿ ಯಥೇಚ್ಛವಾಗಿ ಮಣ್ಣು ಅಗೆಯಲಾಗಿದೆ.
ಮಳೆಗಾಲದಲ್ಲಿ ಮಣ್ಣು ಕುಸಿತದಿಂದ ಬೃಹತ್ ಕಲ್ಲು ಗುಂಡುಗಳು ಏನಾದರೂ ಉರುಳಿದಲ್ಲಿ ಇಲ್ಲಿ ವಾಸಿಸುವ ಸ್ಥಳೀಯರಿಗೆ ಮತ್ತು ಪಕ್ಕದಲ್ಲಿನ ಮೊರಾರ್ಜಿ ವಸತಿ ಶಾಲೆಗೂ ಗಂಡಾಂತರ ತಪ್ಪದಾಗಿದೆ.
ಗುಡ್ಡದ ಸುತ್ತಲೂ ಆಳವಾಗಿ ಕೊರೆದಿರುವ ಮಣ್ಣಿನಿಂದಾಗಿ ಐತಿಹಾಸಿಕ ಕುರುಹುಗಳಾದ ಗುಡ್ಡದ ಮೇಲಿನ ದೇವಸ್ಥಾನ, ಕೋಟೆಯಂತಿರುವ ಗೋಡೆಗಳು ಹಾಳಾಗುತ್ತಿದ್ದರೂ ಸಂಬಂದಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿದೆ.
ಐತಿಹಾಸಿಕ ಪ್ರದೇಶವಾಗಿದ್ದರಿಂದ ಎಲ್ಲೆಂದರಲ್ಲಿ ಇತಿಹಾಸದ ಗುರುತುಗಳಿದ್ದು ಬೃಹತ್ ಕಲ್ಲು ಸೀಳುತ್ತಿರುವುದರಿಂದ ಕೆಲವು ಶಾಸನಗಳು ಹಾಳಾಗುತ್ತಿವೆ.ಅಲ್ಲದೇ ಪ್ರಶ್ನಿಸಿದವರ ಮೇಲೆ ಮಾದ್ಯಮದ ಮುಂದೆ ಹೇಳಿದವರನ್ನೇ ಗುರಿಯಾಗಿಸಿಕೊಂಡು ಹಲ್ಲೆ ಮಾಡುವುದಾಗಿ ಪ್ರಭಾವಿ ವ್ಯಕ್ತಿಗಳಿಂದ ಬೆದರಿಕೆಯ ಕೂಗು ಗ್ರಾಮಸ್ಥರಲ್ಲಿ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಇಲಿಯೊಂದು ಸದ್ದಿಲ್ಲದೇ ಬೆಟ್ಟವನ್ನು ಅಗೆದಂತೆ ದಿನೇ ದಿನೇ ಅಕ್ರಮ ದಂಧೆಕೋರರಿಂದ ಕಲ್ಲು, ಮಣ್ಣು ಇನ್ನಿತರ ನೈಸರ್ಗಿಕ ಪರಿಸರವು ಹಾಳಾಗುತ್ತಿದ್ದು, ಇನ್ನು ಮುಂದಾದರೂ ಸಂಬಂದಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನವಹಿಸಿ ಇಲ್ಲಿನ ಪರಿಸರವನ್ನು ಸಂರಕ್ಷಿಸಬೇಕೆಂಬುದು ಪ್ರವಾಸಿಗರು ಮತ್ತು ರೈತರ ಒತ್ತಾಯವಾಗಿದೆ.
ವರದಿ : ಶ್ರೀನಿವಾಸ ನಾಯ್ಕ