ಬೆಂಗಳೂರು : ಇದೆ ತಿಂಗಳು 22 ರಂದು ನಡೆಯಲಿರುವ ಪಿಎಸ್‌ಐ ಹುದ್ದೆಗೆ ನೇಮಕಾತಿ ಪರೀಕ್ಷೆಯನ್ನು ಮುಂದುವಡುವಂತೆ ಬಿಜೆಪಿ ಮನವಿ ಮಾಡಿದೆ. ಈ ಕುರಿತು ಕೆಇಎ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಲ್ಲದೆ 600 ಹೊಸ ಪಿಎಸ್‌ಐ ಹುದ್ದೆ ನೇಮಕಾತಿಗೂ ಸಿದ್ಧತೆ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸೆ.22ರಂದು ಪರೀಕ್ಷೆ ನಡೆಸಲು ನಿಗದಿ ಮಾಡಿದ್ದಾರೆ. ಪಿಎಸ್‌ಐ ಪರೀಕ್ಷೆ ಬರೆಯಬೇಕಾದ ನೂರಕ್ಕು ಹೆಚ್ಚು ಆಕಾಂಕ್ಷಿಗಳು, ಯುಪಿಎಸ್‌ಸಿ ಮುಖ್ಯಪರೀಕ್ಷೆಯನ್ನು ಬರೆಯುತ್ತಿದ್ದಾರೆ.
ಹೀಗಾಗಿ ಪರೀಕ್ಷಾ ದಿನ ಮುಂದೂಡುವಂತೆ ಮನವಿ ಸಲ್ಲಿಸಿದ್ದಾರೆ. ಪರೀಕ್ಷೆ ಮುಂದೂಡುವ ಕುರಿತ ಸಾಧಕ-ಬಾಧಕಗಳನ್ನು ಇಲಾಖೆಯ ಅಧಿಕಾರಿಗಳು ಹಾಗೂ ಕೆಇಎ ಅವರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ನಾಲ್ಕು ವರ್ಷಗಳಿಂದ ಪಿಎಸ್‌ಐ ನೇಮಕಾತಿ ನಡೆದಿಲ್ಲ. ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲುಒಂದು ವರ್ಷ ಬೇಕಾಗುತ್ತದೆ. ಎರಡು ವರ್ಷ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, 402 ಪಿಎಸ್‌ಐ ಹುದ್ದೆಗಳಿಗೆ ಆದಾಷ್ಟು ಬೇಗ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಇದಾದ ನಂತರ 600 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.