ಸಿರುಗುಪ್ಪ : –ನಗರದ 9ನೇ ವಾರ್ಡಿನ 1ನೇ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮವನ್ನು ವಕೀಲರ ಸಂಘದ ತಾಲೂಕಾಧ್ಯಕ್ಷ ಉಪ್ಪಾರ ವೆಂಕೋಬ ಅವರು ಉದ್ಘಾಟಿಸಿ ಮಾತನಾಡಿದರು.ಸಿರಿದಾನ್ಯಗಳ ಮಹತ್ವವನ್ನು ಸ್ಥಳೀಯ ಮಟ್ಟದಲ್ಲಿ ಜಾಗೃತಿ ಮೂಡಿಸಿ ಪೌಷ್ಟಿಕತೆಯನ್ನು ಹೆಚ್ಚಿಸಬೇಕಿದೆ. ಉತ್ತಮ ಪೋಷಕಾಂಶಗಳನ್ನು ಹೊಂದಿರುವ ತರಕಾರಿ, ಹಣ್ಣು, ಕಾಳುಗಳನ್ನು ಸೇವಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತನಾಡಿದ ಸಿ.ಡಿ.ಪಿ.ಓ ಪ್ರದೀಪ್ ಕುಮಾರ್ ಅವರು ರಾಷ್ಟ್ರೀಯ ಪೋಷಣ ಯೋಜನೆಯಡಿ ಪೋಷಣ ಮಾಸಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮಾತೃವಂದನಾ ಸಪ್ತಾಹದ ವಿಶೇಷತೆ ಹಾಗೂ ಪೌಷ್ಟಿಕ ಆಹಾರದ ಮಹತ್ವವನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಹಿರಿಯ ವಕೀಲ ಎನ್.ಅಬ್ದುಲ್‌ಸಾಬ್ ಅವರು ಪೂರ್ವಜರ ಕಾಲದಲ್ಲಿನ ಹೈನುಗಾರಿಕೆಯ ಮಹತ್ವ, ದಿನನಿತ್ಯದ ಕಾರ್ಯಗಳಲ್ಲೇ ಪಡೆಯುತ್ತಿದ್ದ ದೇಹದ ವ್ಯಾಯಾಮ, ಪ್ರಕೃತಿಯಿಂದ ಉಚಿತವಾಗಿ ದೊರೆಯುವ ವಿಟಮಿನ್‌ಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಮಾತೃವಂದನಾ ಕಾರ್ಯಕ್ರಮ, ಆರು ತಿಂಗಳ ಪುಟ್ಟ ಕಂದಮ್ಮಗಳಿಗೆ ಅನ್ನಪ್ರಾಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗೂ ಪೌಷ್ಟಿಕತೆಯುಳ್ಳ, ಎಳ್ಳು, ಸಜ್ಜೆ, ಗೋದಿ, ರಾಗಿ, ಇನ್ನಿತರ ದಾನ್ಯಗಳಿಂದ ತಯಾರಿಸಿದ ತಿನಿಸುಗಳನ್ನು ಪ್ರದರ್ಶಿಸಲಾಯಿತು.
ಇದೇ ವೇಳೆ ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ.ಎಮ್, ಹಿರಿಯ ವಕೀಲರಾದ ಟಿ.ವೆಂಕಟೇಶ ನಾಯ್ಕ್, ನೆಲಗುಂಟಯ್ಯಸ್ವಾಮಿ, ಮಲ್ಲಿಗೌಡ, ಅಂಗನವಾಡಿ ಮೇಲ್ವಿಚಾರಕಿಯರಾದ ಮಹಾದೇವಿ, ಗಂಗಮ್ಮ ಬಸರಗಿ, ಮೈನಾವತಿ, ಮುನ್ನೀಕರಣ, ನಾಗರತ್ನ, ರೇಖಾರಾಣಿ ಇನ್ನಿತರ ಇಲಾಖೆಗಳ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಹಿಳೆಯರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ