ಶಬರಿಮಲೆ: ಓಣಂ ಮತ್ತು ಕನ್ಯಾ ಮಾಸ ಪೂಜೆ ಹಿನ್ನೆಲೆಯಲ್ಲಿ ಸೆ. 13ರಂದು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಿದೆ.
ತಂತ್ರಿ ರಾಜೀವರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಪಿ.ಎನ್. ಮಹೇಶ್ ನಂಬೂದರಿ ದೇಗುಲದ ಬಾಗಿಲು ತೆರೆದು ದೀಪ ಬೆಳಗಿಸುವರು.ದೇಗುಲದಲ್ಲಿ ಓಣಂ ಸದ್ಯ -ವಿಶೇಷ ಭೋಜನ ಸಿದ್ಧತೆ ಆರಂಭವಾಗಲಿದೆ.
ಶ್ರೀ ಅಯ್ಯಪ್ಪನ ಸನ್ನಿಧಾನದಲ್ಲಿ ಭಕ್ತರಿಗೆ ಭಕ್ಷ್ಯ ವಿಭವಗಳನ್ನೊಳಗೊಂಡ ಭೋಜನ ನೀಡುವ ಪೂಜಾ ಕಾಲ ಇದಾಗಿದ್ದು, ಉತ್ತರಾಷಾಢ ನಕ್ಷತ್ರ ದಿನವಾದ ಸೆ. 14ರಂದು ಪ್ರಧಾನ ಅರ್ಚಕರು, ತಿರು ಓಣಂ ದಿನವಾದ ಸೆ. 15ರಂದು ದೇವಸ್ಥಾನ ಅಧಿಕಾರಿಗಳು, ಸೆ. 16ರಂದು ಪೊಲೀಸರ ವತಿಯಿಂದ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗುವುದು.
ಮೂರು ದಿನ ಮಧ್ಯಾಹ್ನ ಎಲ್ಲಾ ಭಕ್ತರಿಗೆ ಬಾಳೆ ಎಲೆಯಲ್ಲಿ ವಿಶೇಷ ಖಾದ್ಯಗಳನ್ನು ಬಡಿಸಲಾಗುವುದು. ಸೆ. 17ರಂದು ಕನ್ಯಾಮಾಸದ ಮೊದಲನೇ ದಿನದಿಂದ ಮುಂದಿನ 4 ದಿನ ಭಕ್ತರಿಗೆ ದರ್ಶನ ವ್ಯವಸ್ಥೆ ಇರುತ್ತದೆ. ಸೆ. 14ರಿಂದ ಪ್ರತಿದಿನ ತುಪ್ಪದ ಅಭಿಷೇಕ, ಮೆಟ್ಟಿಲು ಪೂಜೆ ನಡೆಯಲಿದೆ. ಸೆ. 21ರಂದು ರಾತ್ರಿ 10 ಗಂಟೆಗೆ ಹರಿವರಾಸನಂ ಗಾಯನದೊಂದಿಗೆ ದೇಗುಲದ ಬಾಗಿಲು ಮುಚ್ಚಲಾಗುತ್ತದೆ.